ADVERTISEMENT

ಅಂಬೇಡ್ಕರ್ ಪರಿನಿಬ್ಬಾಣ| ಸಂವಿಧಾನದ ಬೆಳಕು ಆರದಿರಲಿ: ಸುಬ್ಬು ಹೊಲೆಯಾರ್‌

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 16:07 IST
Last Updated 6 ಡಿಸೆಂಬರ್ 2025, 16:07 IST
<div class="paragraphs"><p>ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕದ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು.   </p></div>

ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕದ್ರಮದಲ್ಲಿ ಮೇಣದ ಬತ್ತಿ ಹಚ್ಚಿ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಡಾ.ಬಿ.ಆರ್‌. ಅಂಬೇಡ್ಕರ್ ಅವರು ಅಸಮಾನತೆ ಅಳಿಸಲು ಸಂವಿಧಾನ ಎಂಬ ಬೆಳಕನ್ನು ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಸುಬ್ಬು ಹೊಲೆಯಾರ್‌ ಹೇಳಿದರು.

ADVERTISEMENT

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಅಂಬೇಡ್ಕರ್ ಪ್ರತಿಮೆ ಬಳಿ ‘ಸಂವಿಧಾನ ಬೆಳಕು ಉಳಿಸಿ– ಅಸಮಾನತೆಯ ಕತ್ತಲನ್ನು ಅಳಿಸಿ’ ಎಂಬ ಘೋಷ ವಾಕ್ಯದಡಿ ಶನಿವಾರ ಆಯೋಜಿಸಿದ್ದ ಅಂಬೇಡ್ಕರ್‌ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಅನೇಕ ಚಳವಳಿಗಳು ಬಂದು ಹೋಗಿವೆ. ವಚನ ಸಾಹಿತ್ಯದ ನಂತರ ಕಮ್ಯುನಿಸ್ಟರು ಹೊರತುಪಡಿಸಿದರೆ, ದಲಿತ ಸಂಘರ್ಷ ಸಮಿತಿ ಒಂದೇ ಮನುಷ್ಯತ್ವದ ಪರವಾಗಿ ಹೋರಾಡಿದ್ದು. ದಸಂಸ ರಾಜ್ಯದ ಚಳವಳಿಗಳ ತಾಯಿ ಎಂದರೆ ತಪ್ಪು ಆಗಲಾರದು. ಅಂಬೇಡ್ಕರ್ ಒಂದು ಜಾತಿ, ಸಮುದಾಯಕ್ಕೆ ಮೀಸಲಾಗದೇ ದೇಶಕ್ಕೆ ಉತ್ತಮವಾದ ಸಂವಿಧಾನ ಕೊಟ್ಟಿದ್ದಾರೆ.  ಮತ್ತಷ್ಟು ಎಚ್ಚರವಾಗಿರಿ ಎಂದು ಅವರು ಹೇಳಿ ಹೋಗಿದ್ದಾರೆ. ಅಸಮಾನತೆಯನ್ನು ಅಳಿಸಲು ಎಲ್ಲರೂ ಸನ್ನದ್ದರಾಗಬೇಕಿದೆ’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಖಜಾಂಚಿ ಶಿವರುದ್ರಯ್ಯ ಮಾತನಾಡಿ, ‘ದಲಿತ ಸಂಘರ್ಷ ಸಮಿತಿ ಈವರೆಗೂ ಸಮಾನತೆ ಎಂಬ ರಥವನ್ನು ಎಳೆದುಕೊಂಡು ಬಂದಿದೆ. ಅದನ್ನು ಹಿಂದಕ್ಕೆ ತಳ್ಳುವ ಕೆಲಸ ಮಾಡಬೇಡಿ. ಯಾರೇ ಆಗಲಿ ದಲಿತ ಸಮುದಾಯವನ್ನು ಮುಂದಕ್ಕೆ ತಳ್ಳುವ ಕೆಲಸ ಮಾಡಬೇಕು’ ಎಂದರು.

ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಮುಖಂಡರಾದ ಇಂದಿರಾ ಕೃಷ್ಣಪ್ಪ, ಶ್ರೀರಾಮ್, ನಿರ್ಮಲಾ, ಪುರುಷೋತ್ತಮ ದಾಸ್, ಬಾಲಕೃಷ್ಣ, ವಕೀಲ ನರಸಿಂಹಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.