ADVERTISEMENT

ನವಜಾತ ಶಿಶುಗಳ ಆಂಬುಲೆನ್ಸ್ ಸೇವೆಗೆ ಚಾಲನೆ

ಕಣ್ಣಿನ ಆರೈಕೆ ಸೇವೆಗೆ ಎಂಟು ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 0:00 IST
Last Updated 14 ಫೆಬ್ರುವರಿ 2024, 0:00 IST
ನವಜಾತ ಶಿಶುಗಳ ಚಿಕಿತ್ಸೆಗೆ ಚಾಲನೆ ನೀಡಲಾದ ಆಂಬುಲೆನ್ಸ್‌ಗಳಲ್ಲಿನ ವ್ಯವಸ್ಥೆಯನ್ನು ದಿನೇಶ್ ಗುಂಡೂರಾವ್‌ ಪರಿಶೀಲಿಸಿದರು. ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.
ನವಜಾತ ಶಿಶುಗಳ ಚಿಕಿತ್ಸೆಗೆ ಚಾಲನೆ ನೀಡಲಾದ ಆಂಬುಲೆನ್ಸ್‌ಗಳಲ್ಲಿನ ವ್ಯವಸ್ಥೆಯನ್ನು ದಿನೇಶ್ ಗುಂಡೂರಾವ್‌ ಪರಿಶೀಲಿಸಿದರು. ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.   

ಬೆಂಗಳೂರು: ನವಜಾತ ಶಿಶುಗಳಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ನಾಲ್ಕು ಆಂಬುಲೆನ್ಸ್‌ಗಳು ಹಾಗೂ ಕಣ್ಣಿನ ಆರೈಕೆ ಸೇವೆಗೆ ಎಂಟು ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕಗಳಿಗೆ ನಗರದಲ್ಲಿ ಮಂಗಳವಾರ ಚಾಲನೆ ದೊರೆಯಿತು. 

ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಈ ಸೇವೆಗಳನ್ನು ಲೋಕಾರ್ಪಣೆ ಮಾಡಿ, ಮಾತನಾಡಿದರು. 

‘ನವಜಾತ ಶಿಶುಗಳ ಮರಣ ಪ್ರಮಾಣ ದರವನ್ನು ಒಂದಂಕಿಗೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಅವಧಿಪೂರ್ವ ಜನಿಸಿದ ಶಿಶುಗಳು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗಿರುವ ಶಿಶುಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯ. ಅಂತಹವರನ್ನು ಕರೆದೊಯ್ಯಲು ಸುಧಾರಿತ ಜೀವ ರಕ್ಷಕ ಸೌಲಭ್ಯಗಳನ್ನು ಒಳಗೊಂಡ ಈ ಆಂಬುಲೆನ್ಸ್‌ಗಳು ಸಹಕಾರಿಯಾಗಲಿವೆ. ವೆಂಟಿಲೇಟ‌ರ್ ಸೇರಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಇರಲಿವೆ. ನವಜಾತ ಶಿಶುಗಳನ್ನು ಆಂಬುಲೆನ್ಸ್‌ನಲ್ಲಿ ಆರೈಕೆ ಮಾಡಲು ಪರಿಣತಿ ಹೊಂದಿರುವ ಶುಶ್ರೂಷಕರೂ ಇರುತ್ತಾರೆ. ರಾಜ್ಯದ ನಾಲ್ಕು ವಿಭಾಗಗಳ ಪ್ರಮುಖ ಆಸ್ಪತ್ರೆಗಳಿಗೆ ನವಜಾತಾ ಶಿಶುಗಳ ಆಂಬುಲೆನ್ಸ್‌ಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಈ ಆಂಬುಲೆನ್ಸ್‌ ಸೇವೆ ವಿಸ್ತರಿಸಲಾಗುವುದು’ ಎಂದು ಹೇಳಿದರು. 

ADVERTISEMENT

‘ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಈ ಆಂಬುಲೆನ್ಸ್‌ಗಳನ್ನ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು. 

ಕಣ್ಣಿನ ಆರೈಕೆ ಸೇವೆ: ‘ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಹೀನತೆಯ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಪ್ರಾರಂಭಿಸಲಾ ಗಿದ್ದು, ಆರೋಗ್ಯ ಸೇವೆಗಳು ಲಭ್ಯವಿಲ್ಲದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸಲು ನೆರವಾಗಲಿವೆ. ಕಣ್ಣಿನ ಪ್ರಾಥಮಿಕ ತಪಾಸಣೆಗೆ ಅಗತ್ಯವಾದ ಉಪಕರಣಗಳನ್ನು ಒಳಗೊಂಡಿರುವ ಈ ವಾಹನದಲ್ಲಿ, ತಲಾ ಒಬ್ಬರು ನೇತ್ರ ತಜ್ಞರು, ಪ್ಯಾರಾ ಮೆಡಿಕಲ್ ನೇತ್ರ ಸಹಾಯಕರು, ಬಿಎಚ್‌ಇಒ ಹಾಗೂ ಶುಶ್ರೂಷಕರು ಇರುತ್ತಾರೆ. ಪ್ರತಿ ವಾಹನವು 15 ರೋಗಿಗಳನ್ನು ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

‘ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಕಾರ್ಯಚಾರಣೆಯ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿ ಕಣ್ಣಿನ ಆರೈಕೆ ಸೇವಗಳನ್ನು ಹೆಚ್ಚಿಸಲಾಗುತ್ತದೆ. ಕಣ್ಣಿನ ಪೊರೆ, ಗ್ಲಾಕೋಮಾ, ಕಾರ್ನಿಯ ಅಸ್ಪಷ್ಟತೆ ಮುಂತಾದ ಸಮಸ್ಯೆಗಳ ತಪಾಸಣೆ ನಡೆಸಲಾಗುತ್ತದೆ. ಶಾಲೆಗಳಿಗೆ ತೆರಳಿ, ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕಣ್ಣಿನ ತಪಾಸಣೆಗೆ ಈ ವಾಹನಗಳು ನೆರವಾಗಲಿವೆ’ ಎಂದರು. 

‘ಈ ವರ್ಷ ದಾವಣಗೆರೆ, ಮಂಡ್ಯ, ಮೈಸೂರು ಸೇರಿ 8 ಜಿಲ್ಲೆಗಳಿಗೆ ಸಂಚಾರಿ ಘಟಕದ ಸೇವೆಗಳು ಲಭ್ಯವಾಗಲಿವೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.