ADVERTISEMENT

ಧರ್ಮದ ಹೆಸರಿನಲ್ಲಿ ಭಯದ ವಾತಾವರಣ: ಈಶ್ವರ ಖಂಡ್ರೆ

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಈಶ್ವರ ಖಂಡ್ರೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 15:55 IST
Last Updated 12 ಮಾರ್ಚ್ 2025, 15:55 IST
ಕಾರ್ಯಕ್ರಮದಲ್ಲಿ (ಎಡದಿಂದ) ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಈಶ್ವರ ಖಂಡ್ರೆ ಮತ್ತು ಶಿವರಾಜ್ ತಂಗಡಗಿ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
-ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ (ಎಡದಿಂದ) ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಈಶ್ವರ ಖಂಡ್ರೆ ಮತ್ತು ಶಿವರಾಜ್ ತಂಗಡಗಿ ಅವರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಧರ್ಮದ ಹೆಸರಿನಲ್ಲಿ ಇತ್ತೀಚೆಗೆ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಸಮಾಜದಲ್ಲಿ ಶಾಂತಿ, ಸಮಾಧಾನ, ಪ್ರೀತಿ, ವಿಶ್ವಾಸ ಇಲ್ಲವಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ವೀರಶೈವ–ಲಿಂಗಾಯತ ಮಠಗಳು ಧರ್ಮ ಪ್ರಚಾರದ ಜತೆಗೆ ಸಾಮಾಜಿಕ ಕಳಕಳಿ ಮೆರೆಯುತ್ತಿವೆ. ಎಲ್ಲ ಸಮುದಾಯದವರನ್ನೂ ಒಳಗೊಂಡು, ಶಿಕ್ಷಣ, ಆಶ್ರಯ, ಆರೋಗ್ಯವನ್ನು ಒದಗಿಸುತ್ತಿವೆ. ಮಠಾಧೀಶರು ಧರ್ಮ ಜಾಗೃತಿಗೆ ದೇಶದಾದ್ಯಂತ ಸಂಚರಿಸುತ್ತಿದ್ದಾರೆ. ಕಾಲಕಾಲಕ್ಕೆ ಸಮಾಜವನ್ನು ಉನ್ನತೀಕರಿಸುವ ಕೆಲಸ ಮಾಡುತ್ತಿದ್ದಾರೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಹೇಳಲಾಗುತ್ತದೆ. ಧರ್ಮ ಅಂದರೆ, ಸತ್ಯ, ನ್ಯಾಯ, ತಂದೆ–ತಾಯಿಯ ಸೇವೆ, ಪ್ರಕೃತಿಯ ರಕ್ಷಣೆಯಾಗಿದೆ. ಬಸವಣ್ಣ ಅವರು ‘ದಯವೇ ಧರ್ಮದ ಮೂಲವಯ್ಯ’ ಎಂದಿದ್ದರು. ಆದರೆ, ಇತ್ತೀಚೆಗೆ ನಾವು ಭೌತಿಕ ಸುಖಕ್ಕೆ ಬಿದ್ದು, ಇದನ್ನು ಮರೆಯುತ್ತಿದ್ದೇವೆ’ ಎಂದರು. 

ADVERTISEMENT

‘ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಪ್ರತಿ ವರ್ಷ ₹500 ಕೋಟಿ ಅನುದಾನ ನೀಡಬೇಕೆಂಬ ಬೇಡಿಕೆಯಿದೆ. ಈ ವರ್ಷ ಹೆಚ್ಚಿನ ಅನುದಾನ ಒದಗಿಸಬೇಕೆಂದು ನಾನು ಕೂಡ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡುತ್ತೇನೆ’ ಎಂದು ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ‘ನಮ್ಮ ಭಾರತೀಯ ನೆಲದಲ್ಲಿ ಅಧ್ಯಾತ್ಮ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ದೈಹಿಕ ಶುಚಿತ್ವದ ಜತೆಗೆ ಮಾನಸಿಕ ಶುಚಿತ್ವಕ್ಕೆ ಅಗತ್ಯವಾದ ಧ್ಯಾನ, ಜಪ, ತಪಗಳನ್ನು ಮೈಗೂಡಿಸಿಕೊಂಡ ದೇಶ ನಮ್ಮದು. ನಾಡಿನಲ್ಲಿ ಅನೇಕ ಸಂತರು, ಸಾಧುಗಳು, ಶರಣರು ಆಗಿ ಹೋಗಿದ್ದಾರೆ. ಅಂತಹ ದಾರ್ಶನಿಕ ಲೋಕದಲ್ಲಿ ಅಗ್ರಗಣ್ಯರಾದವರು ಜಗದ್ಗುರು ರೇಣುಕಾಚಾರ್ಯರು‌‌. ವೀರಶೈವ ಧರ್ಮಕ್ಕೆ ಜೀವ ನೀಡಿದ ಮಹಾನ್ ವ್ಯಕ್ತಿ ಅವರಾಗಿದ್ದು, ಜಾತಿಬೇಧ ತೋರದೆ ಎಲ್ಲರಿಗೂ ಲಿಂಗ ದೀಕ್ಷೆ ನೀಡುವ ಮೂಲಕ ವೀರಶೈವ ತತ್ವ ಬೋಧಿಸಿದರು’ ಎಂದರು.

ಕರ್ನಾಟಕ ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ್, ‘ನಿಗಮಕ್ಕೆ 2023–24ನೇ ಸಾಲಿನಲ್ಲಿ ₹60 ಕೋಟಿ ಅನುದಾನ ನೀಡಲಾಗಿತ್ತು. ಈ ಸಾಲಿಗೆ ₹224 ಕೋಟಿ ನೀಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ವೀರಶೈವ–ಲಿಂಗಾಯತ ಭವನ ನಿರ್ಮಾಣ ಮಾಡಲಾಗುವುದು’ ಎಂದು ಹೇಳಿದರು. 

ಇದಕ್ಕೂ ಮೊದಲು ಎಸ್.ಜೆ.ಆರ್.ಸಿ. ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೇಮಾ ಸಿದ್ಧರಾಜು ಅವರು ರೇಣುಕಾಚಾರ್ಯರ ಬಗ್ಗೆ ಉಪನ್ಯಾಸ ನೀಡಿದರು.

***

‘ಸಮಾಜದಲ್ಲಿ ಇತ್ತೀಚೆಗೆ ಒಡಕನ್ನು ನೋಡುತ್ತಿದ್ದೇವೆ. ಸಮಸ್ತ ವೀರಶೈವ–ಲಿಂಗಾಯತರು ಒಂದೇ. ಒಗ್ಗಟ್ಟಾಗಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು‘

–ರೇಣುಕಾ ಶಿವಾಚಾರ್ಯಾ ಸ್ವಾಮೀಜಿ ಯಡಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.