ADVERTISEMENT

ಅತ್ತಿಬೆಲೆ: ಗೋದಾಮಿನಿಂದ ₹1 ಕೋಟಿ ಮೌಲ್ಯದ ನೈಕಿ ಶೂ ಕಳವು- ಆರೋಪಿಗಳ ಬಂಧನ

ಅತ್ತಿಬೆಲೆ ಪೊಲೀಸರಿಂದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 16:15 IST
Last Updated 2 ಜನವರಿ 2024, 16:15 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೊಲೀಸರು ಕಳವು ಆರೋಪಿಗಳನ್ನು ಬಂಧಿಸಿ ಗೋದಾಮಿನಿಂದ ಕಳವು ಮಾಡಿದ್ದ ಒಂದು ಕೋಟಿ ಮೌಲ್ಯದ ಶೂಗಳನ್ನು ವಶಪಡಿಸಿಕೊಂಡಿದ್ದಾರೆ
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೊಲೀಸರು ಕಳವು ಆರೋಪಿಗಳನ್ನು ಬಂಧಿಸಿ ಗೋದಾಮಿನಿಂದ ಕಳವು ಮಾಡಿದ್ದ ಒಂದು ಕೋಟಿ ಮೌಲ್ಯದ ಶೂಗಳನ್ನು ವಶಪಡಿಸಿಕೊಂಡಿದ್ದಾರೆ   

ಆನೇಕಲ್ : ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನೈಕಿ ಕಂಪನಿಯ ಶೂಗಳನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಸುಭಾಷ್‌ ಪಾಷ(30), ಮನ್ಸರ್‌ ಅಲಿ(26) ಮತ್ತು ಶೆಹುದ್‌ ಅಲಿ ರೆಹಮಾನ್‌(26) ಬಂಧಿತರು. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ನಾಲ್ಕು ಆರೋಪಿಗಳಿಗಾಗಿ ಅತ್ತಿಬೆಲೆ ಪೊಲೀಸರು ಬಲೆ ಬೀಸಿದ್ದಾರೆ.

ಆನೇಕಲ್‌ ತಾಲ್ಲೂಕಿನ ಶೆಟ್ಟಹಳ್ಳಿಯ ನೈಕಿ ಕಂಪನಿಯ ಗೋದಾಮಿನಿಂದ ಅನುಗೊಂಡನಹಳ್ಳಿಯ ಮಿಂತ್ರಾ ಗೋದಾಮಿಗೆ ಹೋಗಬೇಕಾಗಿದ್ದ ಕ್ಯಾಂಟರ್‌ ಲಾರಿಯನ್ನು ಆರೋಪಿಗಳು ಗೋದಾಮಿಗೆ ಕೊಂಡೊಯ್ಯದೇ ಬೆಂಗಳೂರಿನ ರಜಾಕ್‌ಪಾಳ್ಯದ ಶೋರೂಮ್‌ ಒಂದರಲ್ಲಿ ಸ್ಟಾಕ್‌ ಮಾಡಿ ಕ್ಯಾಂಟರ್‌ ವಾಹನವನ್ನು ಚಿಕ್ಕಜಾಲದ ಬಳಿಯ ತರಮನಹಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಎಸ್‌.ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಗೋದಾಮಿನಿಂದ ಹೋದ ಶೂಗಳು ನಿಗದಿತ ಸ್ಥಳಕ್ಕೆ ತಲುಪದ ಹಿನ್ನೆಲೆಯಲ್ಲಿ ನೈಕಿ ಕಂಪನಿ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿತ್ತು. ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಮತ್ತು ಸಬ್‌ಇನ್‌ಸ್ಪೆಕ್ಟರ್‌ ಮುರಳಿ ನೇತೃತ್ವದ ತಂಡವು ಕಾರ್ಯಾಚರಣೆ ಕೈಗೊಂಡು ಆಧುನಿಕ ತಂತ್ರಜ್ಞಾನ ಬಳಸಿ ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ಕಳವಾಗಿದ್ದ ನೈಕಿ ಕಂಪನಿಯ 1,558 ಜೊತೆ ಶೂಗಳ ಪೈಕಿ ಬಹುತೇಕ ಶೂಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯು ಡಿಸೆಂಬರ್‌ 21ರಂದು ನಡೆದಿದ್ದು ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ 25 ರಂದು ಪ್ರಕರಣ ದಾಖಲಾಗಿತ್ತು. ಚಾಲಕನ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ಪೊಲೀಸರು ಜಿಪಿಎಸ್‌ ಟ್ರಾಕರ್‌ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.

ಎಎಸ್ಪಿಗಳಾದ ಪುರುಷೋತ್ತಮ್‌, ನಾಗರಾಜು, ಡಿವೈಎಸ್ಪಿ ಮೋಹನ್‌ ಇದ್ದರು.

ತಮಿಳುನಾಡಿನ ಹೊಸೂರಿನ ಅಂಗಡಿಯೊಂದರಲ್ಲಿ ಕಳವು ಮಾಡಿದ್ದ ದೇವರ ಕಂಚಿನನ ವಿಗ್ರಹ ಕಳಸ ದೀಪಾಲೆ ಕಂಬಗಳನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಎಎಸ್ಪಿಗಳಾದ ಪುರುಷೋತ್ತಮ್‌ ನಾಗರಾಜು ಚಿತ್ರದಲ್ಲಿದ್ದಾರೆ

ಕದ್ದ ದೇವರ ವಿಗ್ರಹ ಪತ್ತೆ

ತಮಿಳುನಾಡಿನ ಹೊಸೂರಿನ ಅಂಗಡಿಯೊಂದರಲ್ಲಿ ಕಳವು ಮಾಡಿ ಟೆಂಟೊದಲ್ಲಿ ಕಂಚಿನ ದೇವರ ವಿಗ್ರಹ ಕಳಸ ದೀಪಾಲೆ ಕಂಬಗಳನ್ನು ಅತ್ತಿಬೆಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾತ್ರಿ 1ಗಂಟೆ ಸುಮಾರಿನಲ್ಲಿ ಟೆಂಪೊನಲ್ಲಿ ಆರೋಪಿಗಳು ಹೋಗುತ್ತಿದ್ದರು. ಪೊಲೀಸರು ಅನುಮಾನಗೊಂಡು ವಾಹನ ತಡೆದರೂ ನಿಲ್ಲಿಸದೇ ಹೋಗಿದ್ದರಿಂದ ಪೊಲೀಸರು ಹಿಂಬಾಲಿಸಿದಾಗ ಅತ್ತಿಬೆಲೆ ಸಮೀಪ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದನು. ಪರಿಶೀಲನೆ ನಡೆಸಿದಾಗ ದೇವಾಲಯಕ್ಕೆ ಸಂಬಂಧಿಸಿದ ಈ ಸಾಮಗ್ರಿಗಳನ್ನು ಹೊಸೂರಿನಿಂದ ಕಳವು ಮಾಡಿರುವುದು ಪತ್ತೆಯಾಯಿತು. ದೇವರ ಸಾಮಗ್ರಿಗಳನ್ನು ಸಂಬಂಧಿಸಿದ ಅಂಗಡಿಗೆ ಹಸ್ತಾಂತರಿಸಲಾಯಿತು ಎಂದು ಅತ್ತಿಬೆಲೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.