ADVERTISEMENT

ಅಂಗಡಿ ಮಳಿಗೆಯಲ್ಲಿ ಅಂಗನವಾಡಿ

ಗುಣಿ ಅಗ್ರಹಾರದಲ್ಲಿ ಎರಡು ವರ್ಷವಾದರೂ ಮುಗಿಯದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 20:09 IST
Last Updated 14 ಆಗಸ್ಟ್ 2019, 20:09 IST
ಅಂಗಡಿ ಮಳಿಗೆಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ
ಅಂಗಡಿ ಮಳಿಗೆಯಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರ   

ಹೆಸರಘಟ್ಟ: ಗುಣಿ ಅಗ್ರಹಾರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಗನವಾಡಿ ಕೇಂದ್ರದ ಕಾಮಗಾರಿ ಎರಡು ವರ್ಷವಾದರೂ ಪೂರ್ಣಗೊಂಡಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

‘ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯು ₹9 ಲಕ್ಷ ಮತ್ತು ಕಸಘಟ್ಟಪುರ ಗ್ರಾಮ ಪಂಚಾಯಿತಿಯು ₹1.5 ಲಕ್ಷ ಅನುದಾನ ನೀಡಿದೆ. ಆದರೆ, ಕಟ್ಟಡದ ಮುಂಭಾಗದ ಗೋಡೆಗೆ ಪ್ಲಾಸ್ಟರಿಂಗ್ ಆಗಿಲ್ಲ. ಎರಡು ವರ್ಷಗಳು ಕಳೆದರೂ ಕೆಆರ್‌ಐಡಿಎಲ್‌ ಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ’ ಎನ್ನುವುದು ಗ್ರಾಮಸ್ಥರ ದೂರು.

'ಪಂಚಾಯಿತಿಯ ಅಂಗಡಿ ಮಳಿಗೆಯಲ್ಲಿ ಅಂಗನವಾಡಿಯನ್ನು ನಡೆಸುತ್ತಿದ್ದಾರೆ. ಜಾಗವು ತುಂಬಾ ಇಕ್ಕಟ್ಟಿನಿಂದ ಕೂಡಿದೆ. ರಸ್ತೆ ಬದಿಯಲ್ಲಿ ಅಂಗನವಾಡಿ ಕೇಂದ್ರವಿದೆ. ಅಂಗನವಾಡಿ ಎದುರಿಗೆ ಚರಂಡಿ ಇರುವುದರಿಂದ ಕಲುಷಿತ ನೀರಿನ ಗಬ್ಬುವಾಸನೆಯಲ್ಲಿ ಮಕ್ಕಳ ಇರಬೇಕಾಗಿದೆ’ ಎಂದು ಗ್ರಾಮದ ನಿವಾಸಿ ಮಂಜುಳಾ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಂಸ್ಥೆಯು ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡರೂ ಸಕಾಲದಲ್ಲಿ ಮುಗಿಸಿ ಕೊಡುವುದಿಲ್ಲ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವುದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಂಸ್ಥೆಗೆ ಗುತ್ತಿಗೆ ನೀಡುವುದನ್ನು ನಿಲ್ಲಿಸುವುದು ಒಳಿತು’ ಎಂದು ಗ್ರಾಮದ ನಿವಾಸಿ ಮನೋಹರ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೇಣುಕಾ ಪ್ರತಿಕ್ರಿಯಿಸಿ, ‘ಎಲ್ಲ ಕೆಲಸಗಳು ಮುಗಿದಿದ್ದು, ಬಣ್ಣ ಮತ್ತು ಚಿತ್ರ ಬಿಡಿಸುವ ಕೆಲಸ ಮಾತ್ರ ಬಾಕಿಇದೆ. ಅದನ್ನು ಅದಷ್ಟು ಬೇಗ ಮುಗಿಸಲು ಸೂಚನೆ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.