ADVERTISEMENT

‘ಅಭಿವೃದ್ಧಿಗೆ 2050ರ ಮುನ್ನೋಟ’

ಬಿಬಿಎಂಪಿ ನೂತನ ಆಯುಕ್ತ ಅನಿಲ್‌ ಕುಮಾರ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST
ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಎನ್‌.ಮಂಜುನಾಥ ಪ್ರಸಾದ್‌ ಬೆಳ್ಳಿಯ ಬೇಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು –ಪ್ರಜಾವಾಣಿ ಚಿತ್ರ
ಬಿ.ಎಚ್‌.ಅನಿಲ್‌ ಕುಮಾರ್‌ ಅವರಿಗೆ ಎನ್‌.ಮಂಜುನಾಥ ಪ್ರಸಾದ್‌ ಬೆಳ್ಳಿಯ ಬೇಟನ್‌ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ 2050ರ ಮುನ್ನೋಟ ದಾಖಲೆ ರೂಪಿಸಿ ಅನುಷ್ಠಾನಗೊಳಿಸಲು ಆದ್ಯತೆ ನೀಡುವುದಾಗಿ ನೂತನ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದರು.

ನಿಕಟಪೂರ್ವ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಸ್ವಚ್ಛ, ಪಾರದರ್ಶಕ ಹಾಗೂ ಜವಾಬ್ದಾರಿಯುತ ಆಡಳಿತ ನೀಡುವುದು ನನ್ನ ಉದ್ದೇಶ. ಸಮಸ್ಯೆ ಕಾಣಿಸಿಕೊಂಡ ಬಳಿಕ ಪರಿಹಾರ ಕಂಡುಕೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸಿ ಅದನ್ನು ತಡೆಯಬೇಕು’ ಎಂದರು.

ADVERTISEMENT

‘ಬೆಂಗಳೂರು ಜಾಗತಿಕ ತಾಣವಾಗಿಯೇ ಮುಂದುವರಿಯಬೇಕಾದರೆ ಅಷ್ಟೇ ಗುಣಮಟ್ಟದ ಆಡಳಿತ ನೀಡಬೇಕು. ಈ ಸಲುವಾಗಿ 30 ವರ್ಷಗಳಲ್ಲಿ ನಗರ ಹೇಗಿರಬೇಕು ಎಂಬ ಮುನ್ನೋಟ ದಾಖಲೆ ರೂಪಿಸುವ ಅವಶ್ಯಕತೆ ಇದೆ. ಅದಕ್ಕೆ ರಚನಾತ್ಮಕ ಹಾಗೂ ಆಡಳಿತ ಸುಧಾರಣೆ ಅಗತ್ಯ' ಎಂದರು.

'ಇಲ್ಲಿ ಜಲತಜ್ಞರು, ನಗರ ಯೋಜನಾ ತಜ್ಞರು, ಕಸ ನಿರ್ವಹಣೆ ತಜ್ಞರು, ಪರಿಸರ ತಜ್ಞರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಐಐಎಸ್ಸಿ, ಐಐಎಂನಂತಹ ಅಂತರರಾಷ್ಟ್ರಿಯ ಮನ್ನಣೆ ಪಡೆದ ಸಂಸ್ಥೆಗಳಿವೆ. ಈ ಸಂಪನ್ಮೂಲಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮುನ್ನೋಟ ರೂಪಿಸಲು ಅವರ ಸಲಹೆಯನ್ನೂ ಪಡೆಯುತ್ತೇನೆ' ಎಂದರು.

‘ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಬಗ್ಗೆ ಕೌನ್ಸಿಲ್‌ ಸಭೆಯಲ್ಲೂ ಚರ್ಚೆ ಆಗಿದೆ. ಪಾಲಿಕೆಯ ಸಂಪನ್ಮೂಲ ಬಳಸಿ ಕೆಲವು ತಿಂಗಳ ಮಟ್ಟಿಗಾದರೂ ಇದನ್ನು ನಡೆಸಬೇಕಾಗುತ್ತದೆ ಎಂದು ಮೇಯರ್‌ ತಿಳಿಸಿದ್ದಾರೆ. ಇದರ ಸಂಪೂರ್ಣ ವೆಚ್ಚವನ್ನು ಭರಿಸಲು ಸರ್ಕಾರವನ್ನು ಕೋರಿದ್ದೆವು. ಆದರೆ, ಆರ್ಥಿಕ ಇಲಾಖೆ ಒಪ್ಪಿರಲಿಲ್ಲ. ಶೇ 50ರಷ್ಟು ವೆಚ್ಚವನ್ನಾದರೂ ಸರ್ಕಾರ ಭರಿಸಬೇಕು’ ಎಂದರು.

ಅನಿಲ್‌ ಕುಮಾರ್ ಅವರು 1992ರಿಂದ 1995ರವರೆಗೆ ಪಾಲಿಕೆಯಲ್ಲಿ ಅಭಿವೃದ್ಧಿ ಆಯುಕ್ತರಾಗಿದ್ದರು.

‘ಜಾಹೀರಾತು: ನಿಯಮಗಳ ಸಮರ್ಥನೆ’
ಹೊರಾಂಗಣ ಜಾಹೀರಾತು ಸಂಬಂಧ ಪಾಲಿಕೆ 2018ರಲ್ಲಿ ರೂಪಿಸಿದ್ದ ಬೈಲಾದ ಬದಲು ನಗರಾಭಿವೃದ್ಧಿ ಇಲಾಖೆ ಪ್ರತ್ಯೇಕ ಕರಡು ನಿಯಮಗಳನ್ನು ರೂಪಿಸಿದ್ದನ್ನು ನೂತನ ಆಯುಕ್ತರು ಸಮರ್ಥಿಸಿಕೊಂಡರು.

‘ಪಾಲಿಕೆ ರೂಪಿಸಿದ ಬೈಲಾ ಹಾಗೂ ನಗರಾಭಿವೃದ್ಧಿ ಇಲಾಖೆ ರೂಪಿಸಿದ್ದ ಹೊರಾಂಗಣ ಜಾಹೀರಾತು ನಿಯಮಗಳು ಪರಸ್ಪರ ಪೂರಕವಾಗಿವೆ. ಪಾಲಿಕೆಯ ಬೈಲಾ ವಾಣಿಜ್ಯ ಮಳಿಗೆಗಳ ಸೈನೇಜ್‌ಗಳ ಕುರಿತದ್ದಾಗಿದ್ದರೆ, ಇಲಾಖೆ ರೂಪಿಸಿರುವ ಕರಡು ನಿಯಮಗಳು ಹೊರಾಂಗಣ ಜಾಹೀರಾತುಗಳಿಗೆ ಸಂಬಂಧಿಸಿದ್ದು. ಅದು ಜಾರಿಯಾದಾಗ ಪಾಲಿಕೆಯೂ ಪಾಲಿಸಲೇಬೇಕಾಗುತ್ತದೆ. ಆದರೆ ಈ ಕುರಿತು ಹೈಕೋರ್ಟ್‌ ಆದೇಶವೇ ಅಂತಿಮ’ ಎಂದರು.

‘ಕಸ ನಿರ್ವಹಣೆ–ಮಂತ್ರದಂಡ ಇಲ್ಲ’
‘ಕಸವನ್ನು ಭೂಭರ್ತಿ ಮಾಡುವಂತಿಲ್ಲ ಎಂಬ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಪಾಲಿಸಲು ಪ್ರಯತ್ನ ಮಾಡಿದ್ದೇವೆ. ಕಸದಿಂದ ವಿದ್ಯುತ್‌ತಯಾರಿಸುವ ಎರಡು ಯೋಜನೆಗಳಿಗೆ ಅನುಮೋದನೆಸಿಕ್ಕಿದೆ. ಇನ್ನೂ ಐದಾರು ಯೋಜನೆಗಳು ವಿವಿಧ ಹಂತಗಳಲ್ಲಿವೆ. ಈ ಸಮಸ್ಯೆಯನ್ನು ಒಂದೇ ದಿನದಲ್ಲಿ ನೀಗಿಸಲು ಸಾಧ್ಯವಿಲ್ಲ. ಎನ್‌ಜಿಟಿಗೂ ಇದನ್ನು ಮನವರಿಕೆ ಮಾಡಿ ಹೆಚ್ಚಿನ ಕಾಲಾವಕಾಶ ಕೋರುತ್ತೇವೆ’ ಎಂದು ಅನಿಲ್‌ ಕುಮಾರ್‌ ತಿಳಿಸಿದರು.

ಹೊಸ ಆಯುಕ್ತರ ಐದು ಆದ್ಯತೆಗಳು
* ಕಸ ನಿರ್ವಹಣೆ

* ಕೆರೆ ಅಭಿವೃದ್ಧಿ

* ನೀರು ಪೂರೈಕೆ ಸಮಸ್ಯೆ ಬಗೆಹರಿಸುವುದು (ಜಲಮಂಡಳಿ ಜತೆ)

* ನಾಗರಿಕ ಕುಂದುಕೊರತೆ ಪರಿಹರಿಸುವುದು

* ಹೊಸರಸ್ತೆ ನಿರ್ಮಿಸುವ ಬದಲು ಇರುವ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು

*
ಅಧಿಕಾರಿಗಳಿರುವುದು ಜನರಿಗೆ ಸೇವೆ ನೀಡಲು. ಸೇವೆಯಲ್ಲಿ ಕೊರತೆ ಕಂಡು ಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ.
-ಬಿ.ಎಚ್‌.ಅನಿಲ್‌ ಕುಮಾರ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.