ADVERTISEMENT

‘ಲೈಂಗಿಕ ಅಲ್ಪಸಂಖ್ಯಾತರಿಗೆ ಘನತೆಯ ಬದುಕು ಕಲ್ಪಿಸಿ’: ಅನಿಂದ್ಯಾ ಹಾಜ್ರ

ಹೋರಾಟಗಾರ್ತಿ ಕೋಲ್ಕತ್ತದ ಅನಿಂದ್ಯಾ ಹಾಜ್ರ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 20:13 IST
Last Updated 6 ಮಾರ್ಚ್ 2022, 20:13 IST
ನಗರದಲ್ಲಿ ಭಾನುವಾರ ನಯನ ಸೂಡ ಅವರ ಅಭಿನಯದ ‘ಅಕ್ಕೈ’ ನಾಟಕ ಪ್ರದರ್ಶನಗೊಂಡಿತು – ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಯನ ಸೂಡ ಅವರ ಅಭಿನಯದ ‘ಅಕ್ಕೈ’ ನಾಟಕ ಪ್ರದರ್ಶನಗೊಂಡಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಾಜದಲ್ಲಿನ ವ್ಯವಸ್ಥೆ ಬದಲಾಗುವವರೆಗೂ ಲೈಂಗಿಕ ಅಲ್ಪಸಂಖ್ಯಾತರು ಹೋರಾಟ ನಡೆಸಬೇಕು. ಪ್ರತಿರೋಧಗಳನ್ನು ಹೋರಾಟದ ಮೂಲಕವೇ ಎದುರಿಸಬೇಕು’ ಎಂದು ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ ಕೋಲ್ಕತ್ತದ ಅನಿಂದ್ಯಾ ಹಾಜ್ರ ಹೇಳಿದರು.

ಕಾಜಾಣ ಮತ್ತು ರಂಗಪಯಣ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಸಾಮಾಜಿಕ ಹೋರಾಟಗಾರ್ತಿ ಅಕ್ಕೈ ಪದ್ಮಸಾಲಿ ಅವರ ಜೀವನ ಆಧಾರಿತ ‘ಅಕ್ಕೈ’ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲೈಂಗಿಕ ಅಲ್ಪಸಂಖ್ಯಾತರಿಗೆ ಅನುಕಂಪ ಬೇಕಾಗಿಲ್ಲ. ಘನತೆಯಿಂದ ಬದುಕುವ ಅವಕಾಶ ಕಲ್ಪಿಸಬೇಕು. ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಸಬಲೀಕರಣಗೊಳಿಸಬೇಕು’ ಎಂದು ಪ್ರತಿಪಾದಿಸಿದರು.

ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ರೋಜಾ ಪಾರ್ಕ್‌ ಅವರ ಹೋರಾಟವನ್ನು ಉಲ್ಲೇಖಿಸಿದ ಅವರು, ‘ಗುರಿ ಈಡೇರುವವರೆಗೂ ರೋಜಾ ಪಾರ್ಕ್‌ ಹೋರಾಟ ಕೈಬಿಡಲಿಲ್ಲ. ಅದೇ ರೀತಿ, ನಾವು ಮೌನವಹಿಸಬಾರದು. ನಮ್ಮ ಅಸ್ತಿತ್ವ ಮತ್ತು ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಈ ಮೂಲಕ ಧ್ರುವೀಕರಣಗೊಂಡ ಸಮಾಜದಲ್ಲಿ ನಮ್ಮ ಮತ್ತು ಇತರರ ನಡುವಣ ಅಂತರ ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಲೈಂಗಿಕ ಅಲ್ಪಸಂಖ್ಯಾತರ ಬದುಕು ಮತ್ತು ಸಾವಿಗೂ ಮಾನ್ಯತೆ ಇಲ್ಲದಂತಾಗಿದೆ. ಈ ಸನ್ನಿವೇಶ ಬದಲಾಯಿಸಲು ಶ್ರಮಿಸಬೇಕು. ನಮ್ಮ ಅಸ್ತಿತ್ವ ಕಂಡುಕೊಳ್ಳಲು ರಾಜಕೀಯ ಕ್ಷೇತ್ರವೂ ಮುಖ್ಯ ವೇದಿಕೆಯಾಗಿದೆ. ಒಳಗೊಳ್ಳುವಿಕೆ ಜಗತ್ತಿನಲ್ಲಿ ವಿಭಿನ್ನ ಅಸ್ಮಿತೆಯ ಜನರಿದ್ದಾರೆ. ಆದರೆ, ನಮ್ಮ ಜೀವನ ಮಾತ್ರ ಸಂಕೀರ್ಣವಾಗಿದೆ. ನಮ್ಮನ್ನು ಒಪ್ಪಿಕೊಳ್ಳುವಂತೆ ಮನಸ್ಸುಗಳನ್ನು ಬದಲಾಯಿಸಬೇಕು’ ಎಂದು ಹೇಳಿದರು.

ನಿರ್ದೇಶಕ ಬೇಲೂರು ರಘುನಂದನ್‌ ಮಾತನಾಡಿ, ‘ಮಗು ಜನಿಸಿದಾಗ ವಿಶ್ವಮಾನವನಾಗಿರುತ್ತದೆ. ಆದರೆ, ಬೆಳೆದಂತೆ ಅಲ್ಪಮಾನವನಾಗುತ್ತದೆ. ಅದೇ ರೀತಿ, ಸಮಾಜ ಎಷ್ಟೇ ಅಲ್ಪನನ್ನಾಗಿ ಮಾಡಲು ಪ್ರಯತ್ನಿಸಿದರೂ ಛಲದಿಂದ ಎಲ್ಲರಂತೆ ಬದುಕಿ ತೋರಿಸಿ ಸಮಾನತೆಗಾಗಿ ಹೋರಾಟ ಮಾಡಿದವರು ಅಕ್ಕೈ ಪದ್ಮಸಾಲಿ’ ಎಂದು ಪ್ರಶಂಸಿದರು.

‘ಸಮಾಜವನ್ನು ವಿಭಿನ್ನ ದಿಕ್ಕಿನಲ್ಲಿ ಆಲೋಚಿಸುವಂತೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಅಕ್ಕೈ ಜೀವನಾಧಾರಿತ ಕೃತಿಯನ್ನು ರಂಗಕ್ಕೆ ತರಲಾಗಿದೆ. ನಾವೆಲ್ಲರೂ ಸಮಾನರು ಎನ್ನುವ ಸಂದೇಶವನ್ನು ನಾಟಕ ಸಾರುತ್ತದೆ’ ಎಂದು ವಿವರಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ಭಾರತೀಯ ಸಮಾಜ ಇಂದಿಗೂ ಒಳಗೊಳ್ಳುವಿಕೆ ತತ್ವ ಹೊಂದಿಲ್ಲ. ಸಂಕೀರ್ಣವಾದ ಸಮಾಜವಾಗಿದೆ. ಲೈಂಗಿಕ ಅಲ್ಪಸಂಖ್ಯಾತರು ಸಹ ನಮ್ಮವರು ಎಂದು ಪರಿಗಣಿಸಿ ನಾಗರಿಕ ಸಮಾಜವೇ ಅವರ ಪರ ಹೋರಾಟ ನಡೆಸಬೇಕು ಮತ್ತು ಅವರಿಗಾಗಿಯೇ ಬಜೆಟ್‌ ಮಂಡಿಸಬೇಕು’ ಎಂದರು.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ನಾಯಕಿ ಸೌಮ್ಯ ಮಾತನಾಡಿ, ‘ಇಡೀ ಸಮಾಜ ನಮ್ಮನ್ನು ತಾತ್ಸಾರ ಮನೋಭಾವದಿಂದ ಕಾಣುತ್ತಿದೆ. ವಾಹಿನಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಮ್ಮ ಸಮುದಾಯದ ವೇಷಭೂಷಣ ತೊಟ್ಟು ಅಪಹ್ಯಾಸ ಮಾಡಲಾಗುತ್ತಿದೆ. ಒಳ್ಳೆಯ ಮನುಷ್ಯರಿಗೆ ಮಾತ್ರ ನಮ್ಮ ನೋವು, ದುಃಖಗಳು ಅರ್ಥವಾಗುತ್ತವೆ’ ಎಂದು ಅಳಲು ತೋಡಿಕೊಂಡರು.

ಅಕ್ಕೈ ಪದ್ಮಸಾಲಿ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ. ಡೊಮಿನಿಕ್‌ ಡಿ, ಬೇಲೂರು ತಹಶೀಲ್ದಾರ್‌ ಉಲಿವಾಲ ಮೋಹನ್‌ ಕುಮಾರ್‌, ಅಕ್ಕೈ ಪದ್ಮಶಾಲಿ ಅವರ ಸಹೋದರ ಪ್ರದೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.