ADVERTISEMENT

ಅಂಜನಾಪುರ ಸಮಸ್ಯೆ: ಹಂತ–ಹಂತವಾಗಿ ಪರಿಹಾರ

ಶಾಸಕ, ನಿವಾಸಿಗಳು, ಅಧಿಕಾರಿಗಳ ಜತೆ ಬಿಡಿಎ ಅಧ್ಯಕ್ಷರ ಸಭೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:40 IST
Last Updated 2 ಸೆಪ್ಟೆಂಬರ್ 2021, 16:40 IST

ಬೆಂಗಳೂರು: ಅಂಜನಾಪುರ ಬಡಾವಣೆಯ ರಸ್ತೆ ಮತ್ತು ಎಲ್ಲ ಮೂಲಸೌಕರ್ಯ ಸಮಸ್ಯೆಗಳನ್ನು ಹಂತ–ಹಂತವಾಗಿ ಪರಿಹರಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತಿಳಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಡಾವಣೆ ನಿವಾಸಿಗಳು ಮತ್ತು ಅಧಿಕಾರಿಗಳ ಜತೆ ವಿಶ್ವನಾಥ್ ಗುರುವಾರ ಸಭೆ ನಡೆಸಿದರು.

ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಜಲ ಮಂಡಳಿಯಿಂದ ರಸ್ತೆ ಅಗೆದಿದ್ದರಿಂದ ಗುಂಡಿ ಬಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಂಜನಾಪುರ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ, ಬೀದಿ ದೀಪ ಸೇರಿ ಮೂಲಸೌಕರ್ಯ ಕೊರತೆ ಇದೆ ಎಂದು ಶಾಸಕ ಕೃಷ್ಣಪ್ಪ ಮತ್ತು ನಿವಾಸಿಗಳು ಅಧ್ಯಕ್ಷರ ಗಮನಕ್ಕೆ ತಂದರು.

ADVERTISEMENT

ಪ್ರತಿಕ್ರಿಯಿಸಿದ ವಿಶ್ವನಾಥ್, ‘ಹಾಳಾಗಿರುವ ಅಂಜನಾಪುರ ಮುಖ್ಯರಸ್ತೆ ಅಭಿವೃದ್ಧಿಗೆ ₹25 ಕೋಟಿ ಮೀಸಲಿಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಅಂಜನಾಪುರ ಬಡಾವಣೆಯ ಇತರೆ ಭಾಗಗಳು ಮತ್ತು ಈ ಬಡಾವಣೆಗೆ ಹೊಂದಿಕೊಂಡಿರುವ ಜೆ.ಪಿ. ನಗರ 8 ಮತ್ತು 9ನೇ ಬ್ಲಾಕ್‌ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಹಂತ–ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ₹40 ಕೋಟಿ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಸಂಬಂಧಿಸಿದಂತೆ ಜಲಮಂಡಳಿಗೆ ಬಿಡಿಎ ನೀಡಬೇಕಾಗಿರುವ ಹಣವನ್ನು ಆದ್ಯತೆ ಮೇರೆಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಬಿಡಿಎ ಆಯುಕ್ತ ಎಂ.ಬಿ.ರಾಜೇಶಗೌಡ, ಎಂಜಿನಿಯರಿಂಗ್ ಸದಸ್ಯ ಶಾಂತರಾಜಣ್ಣ, ಉಪವಿಭಾಗಾಧಿಕಾರಿ ಡಾ.ಸೌಜನ್ಯ ಇದ್ದರು.

‘ದೊಡ್ಡಕಲ್ಲಸಂದ್ರ–ಗೊಟ್ಟಿಗೆರೆ ಪ್ರಯಾಣ ಹೈರಾಣ’ ಎಂಬ ವರದಿಯನ್ನು ‘ಪ್ರಜಾವಾಣಿ’ ಗುರುವಾರ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.