ADVERTISEMENT

ಸಂಕ್ಷಿಪ್ತ ಸುದ್ದಿಗಳು: 32.35 ಲಕ್ಷ ಜನರಿಗೆ ಅನ್ನಭಾಗ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 15:28 IST
Last Updated 5 ಏಪ್ರಿಲ್ 2025, 15:28 IST
   

32.35 ಲಕ್ಷ ಜನರಿಗೆ ಅನ್ನಭಾಗ್ಯ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನ್ನಭಾಗ್ಯ ಯೋಜನೆಯಡಿ 32,35,457 ಫಲಾನುಭವಿಗಳಿಗೆ ₹54.42 ಕೋಟಿ ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ. ಕೃಷ್ಣಪ್ಪ ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಯಾಗಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಪ್ರತಿ ಫಲಾನುಭವಿಗಳ ಮನೆ ಮುಂದೆ ರಂಗೋಲಿ ಬಿಡಿಸಿ ಮನೆ-ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಗೃಹಲಕ್ಷ್ಮಿ ಯೋಜನೆಯಡಿ 2024ರ ಡಿಸೆಂಬರ್‌ ಅಂತ್ಯಕ್ಕೆ 8,80,415 ಫಲಾನುಭವಿಗಳಿಗೆ ₹176 ಕೋಟಿ ಭರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 33,21,262 ಫಲಾನುಭವಿಗಳಿದ್ದು, 2025ರ ಫೆಬ್ರುವರಿ ಅಂತ್ಯಕ್ಕೆ ₹222.12 ಕೋಟಿ, ಯುವನಿಧಿ ಯೋಜನೆಯಡಿ 12,470 ಫಲಾನುಭವಿಗಳಿಗೆ ₹3.72 ಕೋಟಿ, ಶಕ್ತಿ ಯೋಜನೆಯಡಿ 6,21,52,268 ಫಲಾನುಭವಿಗಳಿದ್ದು, ₹95.63 ಕೋಟಿ ಭರಿಸಲಾಗಿದೆ ಎಂದು ತಿಳಿಸಿದರು.

ಅಕ್ರಮ ಒತ್ತುವರಿ ತೆರವು

ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿದ್ದ ಸುಮಾರು ₹34.17 ಕೋಟಿ ಮೌಲ್ಯದ ಒಟ್ಟು 12 ಎಕರೆ 0.25 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ. ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ.

ಬಿದರಹಳ್ಳಿ, ವರ್ತೂರು, ಸರ್ಜಾಪುರ, ತಾವರೆಕೆರೆ, ಯಲಹಂಕ, ಹೆಸರುಘಟ್ಟ, ದಾಸನಪುರ, ಯಶವಂತಪುರ ಹೋಬಳಿಯಲ್ಲಿ  ಒತ್ತುವರಿ ತೆರವುಗೊಳಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್ ಹಾಗೂ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

13ಕ್ಕೆ ‘ಪುಕ್ಕಟೆ ಸಲಹೆ’ ನಾಟಕದ ನೂರನೇ ಪ್ರದರ್ಶನ

ಬೆಂಗಳೂರು: ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡವು ಚುಟುಕು ಸಾಹಿತಿ ಎಚ್.ಡುಂಡಿರಾಜ್ ಅವರು ರಚಿಸಿರುವ ‘ಪುಕ್ಕಟೆ ಸಲಹೆ’ ಹಾಸ್ಯ ನಾಟಕದ 100ನೇ ಪ್ರದರ್ಶನವನ್ನು ಇದೇ 13ರಂದು ಸಂಜೆ 5 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದೆ. 

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಟಕದ ನಿರ್ದೇಶಕ ಅಶೋಕ್ ಬಿ., ‘ನಾಟಕದ ನೂರನೇ ಪ್ರದರ್ಶನದ ಕಾರ್ಯಕ್ರಮದಲ್ಲಿ ನಾ. ದಾಮೋದರ ಶೆಟ್ಟಿ, ಬಿ.ಆರ್.ಲಕ್ಷ್ಮಣರಾವ್ ಸೇರಿ ಸಾಹಿತ್ಯ ಕ್ಷೇತ್ರದ ಪ್ರಮುಖರು ಭಾಗವಹಿಸುತ್ತಾರೆ. ಈ ನಾಟಕವು ಜ್ಯೋತಿಷ್ಯದ ಅವಾಂತರಗಳ ಬಗ್ಗೆ ಹಾಸ್ಯ–ವಿಡಂಬನೆಯನ್ನು ಹೊಂದಿದೆ. 90 ನಿಮಿಷ ಅವಧಿಯ ನಾಟಕದಲ್ಲಿ 15ಕ್ಕೂ ಹೆಚ್ಚು ಕಲಾವಿದರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

ವೆಂಕಟೇಶ್‌ಗೆ ಕನ್ನಡ ಸಂಸ್ಕೃತಿ ಇಲಾಖೆ ಹೊಣೆ

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಎಂ.ವಿ.ವೆಂಕಟೇಶ್‌ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯ ಹೆಚ್ಚುವರಿ ಹೊಣೆ ನೀಡಲಾಗಿದೆ.

ಈ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನಿಭಾಯಿಸುತ್ತಿದ್ದ ಮಂಜುಳಾ ಎನ್‌. ಅವರನ್ನು ಬಿಡುಗಡೆ ಮಾಡಿದ್ದರಿಂದ ತೆರವಾಗಿದ್ದ ಸ್ಥಾನವನ್ನು ವೆಂಕಟೇಶ್‌ ಅವರಿಗೆ ವಹಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.