ADVERTISEMENT

ಬಿಬಿಎಂಪಿಗೆ ವಾರ್ಷಿಕ ₹ 14 ಕೋಟಿ ಉಳಿತಾಯ

ಬಿಡದಿ: ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 23:02 IST
Last Updated 2 ಡಿಸೆಂಬರ್ 2020, 23:02 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ‘ಕರ್ನಾಟಕ ವಿದ್ಯುತ್ ನಿಗಮ ವತಿಯಿಂದ ಬಿಡದಿಯಲ್ಲಿ ನಿರ್ಮಿಸಲಾಗುವ 11.5 ಮೆಗಾ ವಾಟ್ ಸಾಮರ್ಥ್ಯದ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕದಿಂದಬಿಬಿಎಂಪಿಗೆ ವಾರ್ಷಿಕ ₹ 14 ಕೋಟಿ ಉಳಿತಾಯ ಆಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಘಟಕಕ್ಕೆ ವರ್ಚುವಲ್ ಮೂಲಕ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ‘ಇಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ನಡೆಯಲಿದೆ. ಪರಿಸರ ಸಂರಕ್ಷಣೆಗಾಗಿ ರಾಜ್ಯದಲ್ಲಿ ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸರ್ಕಾರ ಬದ್ಧವಾಗಿದೆ’ ಎಂದರು.

‘ಈ ಯೋಜನೆಗೆ ₹ 260 ಕೋಟಿ ವೆಚ್ಚ ತಗಲಲಿದ್ದು, ಕರ್ನಾಟಕ ವಿದ್ಯುತ್ ನಿಗಮ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೇ 50ರಂತೆ ತಲಾ ₹ 130 ಕೋಟಿ ಹೂಡಿಕೆ ಮಾಡಲಿದೆ. ನಿಗಮದ ಜಾಗದಲ್ಲಿ ಘಟಕ ನಿರ್ಮಾಣವಾಗಲಿದ್ದು, ಇಲ್ಲಿ ನಿತ್ಯ ಸುಮಾರು 600 ಟನ್‍ಗಳಷ್ಟು ತ್ಯಾಜ್ಯ ವಿಲೇವಾರಿ ಆಗಲಿದೆ. ಆ ಮೂಲಕ, ಬಿಬಿಎಂಪಿ ವ್ಯಾಪ್ತಿಯ ಶೇ 25 ರಷ್ಟು ಮಿಶ್ರ ತ್ಯಾಜ್ಯ ವಿಲೇವಾರಿ ಸಾಧ್ಯವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಪ್ರಧಾನಿಯವರು ಚಾಲನೆ ನೀಡಿರುವ ‘ಆತ್ಮ ನಿರ್ಭರ್ ಭಾರತ್’ ಯೋಜನೆ ಅನ್ವಯ ಈ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ಬಳಸುವ ಹೆಚ್ಚಿನ ವಸ್ತುಗಳು ಸ್ವದೇಶಿ ಆಗಿರುತ್ತದೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಯೋಜನೆಗೆ ಕೇಂದ್ರ ಸರ್ಕಾರದ ವತಿಯಿಂದ ಗರಿಷ್ಠ ಶೇ 35 ಹಾಗೂ ರಾಜ್ಯ ಸರ್ಕಾರದ ವತಿಯಿಂದ ಗರಿಷ್ಠ ಶೇ 23.3ರಷ್ಟು ಪ್ರೋತ್ಸಾಹ ಧನ ಬಿಡುಗಡೆ ಮಾಡಲಾಗುವುದು. ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವ ಜೊತೆಗೆ, ನಾಗರಿಕ ಸೌಲಭ್ಯಗಳೂ ಲಭಿಸಲಿವೆ. ಅಲ್ಲದೆ, ಪೂರಕ ಕೈಗಾರಿಕಾ ಘಟಕ
ಗಳೂ ಸ್ಥಾಪನೆ ಆಗಲಿವೆ’ ಎಂದು ಹೇಳಿದರು.

‘ಇಷ್ಟೊಂದು ದೊಡ್ಡ ಸಾಮರ್ಥ್ಯದ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಗೊಳ್ಳುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಏಷ್ಯಾ ಖಂಡದಲ್ಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲೊಂದು. ಇಲ್ಲಿ ನಿತ್ಯ ಸುಮಾರು 5,000 ಟನ್‍ ಘನತ್ಯಾಜ್ಯ ಉತ್ಪಾದನೆಯಾಗುತ್ತಿದೆ’ ಎಂದರು.

‘ಪರಿಸರ ಸ್ನೇಹಿ ವ್ಯವಸ್ಥೆಯಲ್ಲಿ, ಆಧುನಿಕ ತಂತ್ರಜ್ಞಾನ ಬಳಿಸಿ ಈ ಘಟಕದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲಾಗುವುದು. ಮಿಶ್ರ ತ್ಯಾಜ್ಯವನ್ನು ತಿಪ್ಪೆಗೆ ಸುರಿಯುವುದನ್ನು ತಪ್ಪಿಸುವ ಮೂಲಕ ಪರಿಸರವನ್ನು ಉತ್ತಮಗೊಳಿಸಲಾಗುವುದು. ಈ ಘಟಕದ ಉಪ ಉತ್ಪನ್ನವಾಗಿ 80.59 ದಶ ಲಕ್ಷ ಯೂನಿಟ್ ವಿದ್ಯುತ್ ಬಳಕೆಗೆ ಲಭ್ಯವಾಗಲಿದೆ’ ಎಂದು ವಿವರಿಸಿದರು.

‘ತ್ಯಾಜ್ಯದ ಸಮರ್ಪಕ ನಿರ್ವಹಣೆ ಆಗದೇ ಇದ್ದರೆ ಅಂತರ್ಜಲದ ಗುಣಮಟ್ಟ ಕುಸಿಯುತ್ತದೆ. ಜೈವಿಕ ಇಂಧನ, ಗೊಬ್ಬರ, ನೈರ್ಮಲ್ಯದ ಗುಂಡಿಗಳು ಹಾಗೂ ತ್ಯಾಜ್ಯ ವಿದ್ಯುತ್ ಉತ್ಪಾದನೆ ಮೂಲಕ ಅತ್ಯಧಿಕ ಮಿಶ್ರ ಅಥವಾ ಸಂಸ್ಕರಿಸಿದ ತ್ಯಾಜ್ಯವನ್ನು ಕಡಿಮೆ ಖರ್ಚಿನೊಂದಿಗೆ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬಹುದು’ ಎಂದೂ ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.