ADVERTISEMENT

ಕಬ್ಬನ್‌ ಉದ್ಯಾನಕ್ಕೆ ಮತ್ತೊಂದು ದ್ವಾರ

ಸಚಿವ ಎಂ.ಸಿ.ಮನಗೂಳಿ ಉದ್ಘಾಟನೆ l ₹40 ಲಕ್ಷ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:40 IST
Last Updated 19 ಜೂನ್ 2019, 19:40 IST
ಸೈಕಲ್‌ ನಿಲ್ದಾಣ – ಪ್ರಜಾವಾಣಿ ಚಿತ್ರ
ಸೈಕಲ್‌ ನಿಲ್ದಾಣ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಡ್ಸನ್‌ ವೃತ್ತದ ಬಳಿ ನಿರ್ಮಿಸಿರುವಕಬ್ಬನ್ ಉದ್ಯಾನದ ಪ್ರವೇಶದ್ವಾರ ಹಾಗೂ ಸೈಕಲ್‌ ನಿಲ್ದಾಣವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಬುಧವಾರ ಉದ್ಘಾಟಿಸಿದರು.

‘ಲೋಕೋಪಯೋಗಿ ಇಲಾಖೆ ವತಿಯಿಂದ ₹40 ಲಕ್ಷ ವೆಚ್ಚದಲ್ಲಿ ಪ್ರವೇಶದ್ವಾರ ನಿರ್ಮಾಣ ಮಾಡಲಾಗಿದೆ.ಮಾಲಿನ್ಯ ನಿಯಂತ್ರಣ ಹಾಗೂ ಪರಿಸರಸ್ನೇಹಿ ಸಾರಿಗೆಗೆ ಉತ್ತೇಜನ ನೀಡಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೈಕಲ್‌ ಸ್ಟ್ಯಾಂಡ್‌ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಅನುಕೂಲ ಆಗುವ ರೀತಿಯಲ್ಲಿ ಸೈಕಲ್‌ಗಳು ಬಳಕೆಗೆ ಲಭ್ಯವಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್‌ ಉದ್ಯಾನ) ಮಹಾಂತೇಶ ಮುರಗೋಡ ತಿಳಿಸಿದರು.

‘ಪ್ರವಾಸಿಗರು ₹500 ಮುಂಗಡ ಹಣ ಪಾವತಿಸಿ ಸೈಕಲ್‌ ಬಳಸಬಹುದು. ಮೂರು ಗಂಟೆಗೆ ₹50 ಹಾಗೂ 6 ಗಂಟೆಗೆ ₹100 ದರ ನಿಗದಿ ಪಡಿಸಲಾಗಿದೆ. ಸೈಕಲ್‌ ಸವಾರರೂ ನೋಂದಣಿಯಾಗಿ ಸೈಕಲ್‌ಗಳನ್ನು ಬಳಕೆ ಮಾಡಬಹುದು. ಪ್ರವಾಸಿಗರಿಗಿಂತ ನೋಂದಾಯಿತರಿಗೆ ದರ ರಿಯಾಯಿತಿ ಇದೆ. ಇದರಿಂದ ಬರುವ ಆದಾಯದಲ್ಲಿ ಶೇ 20ರಷ್ಟು ಹಣವನ್ನು ತೋಟಗಾರಿಕೆ ಇಲಾಖೆಗೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದರು.

ADVERTISEMENT

‘ನಮ್ಮ ನಿಮ್ಮ ಸೈಕಲ್‌’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮುರಳಿ, ‘₹5 ಲಕ್ಷ ವೆಚ್ಚದಲ್ಲಿ ಸೈಕಲ್‌ ನಿಲ್ದಾಣ ತೆರೆಯಲಾಗಿದೆ. ₹6 ಸಾವಿರ ವೆಚ್ಚದ 25 ಸೈಕಲ್‌ಗಳು ಪ್ರವಾಸಿಗರಿಗೆ ಲಭ್ಯ ಇರಲಿವೆ. ಸೈಕಲ್‌ ಬಳಕೆಗೆಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗಿದೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಐತಿಹಾಸಿಕ ತಾಣಗಳ ಮಾಹಿತಿಯನ್ನೊಳಗೊಂಡ ಕೈಪಿಡಿ ನೀಡಲಿದ್ದೇವೆ. ನಕ್ಷೆಯ ಸಹಾಯದಿಂದ ಸುಲಭವಾಗಿ ಸ್ಥಳಗಳನ್ನು ತಲುಪಬಹುದು. ಸೈಕಲ್‌ಗಳು ಕಳವಾಗದಂತೆ ಜಿಪಿಎಸ್‌ ಅಳವಡಿಸಿದ್ದೇವೆ’ ಎಂದು ಹೇಳಿದರು.

ಪ್ರವಾಸಿಗರಿಗೆ ಸೈಕಲ್‌ ಟೂರಿಸಂ

ಕಬ್ಬನ್‌ ಉದ್ಯಾನದ ಸುತ್ತಮುತ್ತ ಹಲವಾರು ಐತಿಹಾಸಿಕ ತಾಣಗಳಿವೆ. ಹೀಗಾಗಿ ನಗರಕ್ಕೆ ಬರುವ ಪ್ರವಾಸಿಗರು ಕಬ್ಬನ್‌ ಉದ್ಯಾನದ ಮೂಲಕ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌, ಡಿಸ್ಕವರಿ ವಿಲೇಜ್‌ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ಸೈಕಲ್‌ ಟೂರಿಸಂ’ ಆರಂಭಿಸಿದೆ.

ಪ್ರವಾಸಿಗರು ಸೈಕಲ್‌ ಏರಿ ವಿಧಾನಸೌಧ, ಹೈಕೋರ್ಟ್‌, ಸೆಂಚುರಿ ಕ್ಲಬ್‌, ಕೇಂದ್ರ ಗ್ರಂಥಾಲಯ, ವೆಂಕಟಪ್ಪ ಆರ್ಟ್‌ ಗ್ಯಾಲರಿ, ಕೆಂಪೇಗೌಡ ಮ್ಯೂಸಿಯಂ, ಮತ್ಸ್ಯಾಲಯ, ರೇಸ್‌ಕೋರ್ಸ್‌, ನೆಹರೂ ತಾರಾಲಯ, ಮಿಥಿಕ್‌ ಸೊಸೈಟಿ ಸೇರಿ ಒಟ್ಟು 31 ಪಾರಂಪರಿಕ ತಾಣಗಳಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.