ಬೆಂಗಳೂರು: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವತಿಯಿಂದ ಇಂಗ್ಲಿಷ್‌ನಿಂದ ಭಾರತೀಯ ಭಾಷೆಗಳಿಗೆ ಅನುವಾದವಾಗುವ ಶೈಕ್ಷಣಿಕ ಸಂಪನ್ಮೂಲಗಳ ಆನ್‌ಲೈನ್ ರೂಪದ ‘ಅನುವಾದ ಸಂಪದ’ವನ್ನು ಬುಧವಾರ ಬಿಡುಗಡೆ ಮಾಡಲಾಯಿತು.
‘ಇದೊಂದು ವಿನೂತನ ಪ್ರಯತ್ನವಾಗಿದ್ದು, ದೇಶದಲ್ಲಿರುವ ಶೈಕ್ಷಣಿಕ ಸಂಪನ್ಮೂಲಗಳು ಮುಕ್ತವಾಗಿ ಮತ್ತು ವ್ಯಾಪಕವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಲಭ್ಯವಾಗಬೇಕು ಎಂಬ ಉದ್ದೇಶದೊಂದಿಗೆ ಈ ಡಿಜಿಟಲ್ ಸಂಪದವನ್ನು ಬಿಡುಗಡೆ ಮಾಡಲಾಗಿದೆ’ ಎಂದು ವಿಶ್ವ
ವಿದ್ಯಾಲಯದ ಕುಲಪತಿ ಇಂದು ಪ್ರಸಾದ್ ಅವರು ಮಾಹಿತಿ ನೀಡಿದರು.
‘ಈ ಅನುವಾದ ಸಂಪದವು ಪ್ರಸ್ತುತ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದ್ದು, ಶೈಕ್ಷಣಿಕ ಸಂಪನ್ಮೂಲಗಳಿಗೆ ಸಂಬಂಧಿಸಿ 2000ಕ್ಕೂ ಹೆಚ್ಚಿನ ಲೇಖನಗಳು ಇವೆ’ ಎಂದು ಅವರು ವಿವರಣೆ ನೀಡಿದರು.
‘ಭಾರತೀಯ ಭಾಷೆಗಳಲ್ಲಿ ಉನ್ನತ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳ ಕೊರತೆ ಇದ್ದು, ಇದು ಅಂತಹ ಕೊರತೆಯನ್ನು ತುಂಬಲಿದೆ. ಇದರಿಂದ ದೇಶದ ಯಾವುದೇ ಮೂಲೆಯಲ್ಲಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನ, ಸಮಾಜ ವಿಜ್ಞಾನ, ಮತ್ತು ಭಾಷಾ ವಿಷಯಗಳ ಶೈಕ್ಷಣಿಕ ಸಂಪನ್ಮೂಲಗಳನ್ನು ಹುಡುಕಿ, ಬಳಸಿ, ಮರುಬಳಕೆ ಮಾಡಲು ಸಾಧ್ಯವಾಗಲಿದೆ’ ಎಂದರು.
‘ಹಿಂದಿ ಮತ್ತು ಕನ್ನಡದಲ್ಲಿ ಸ್ವಾತಂತ್ರವಾದ ಹೊಸ ಬರವಣಿಗೆ ಓದು, ಚರ್ಚೆ ಮತ್ತು ಸಂವಾದವನ್ನು ಉತ್ತೇಜಿಸಲು ಈ ಸಂಪದ ಸಹಕಾರಿಯಾಗಲಿದೆ’ ಎಂದು ಕುಲಪತಿ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.