ADVERTISEMENT

ಎಪಿಪಿಗಳ ನೇಮಕ ಪ್ರಕರಣ: ವಿಚಾರಣೆಗೆ ಹೈಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:31 IST
Last Updated 21 ಜೂನ್ 2019, 19:31 IST

ಬೆಂಗಳೂರು: ‘2014ನೇ ಸಾಲಿನಲ್ಲಿ 197 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ (ಎಪಿಪಿ) ಆಯ್ಕೆ ಪ್ರಕ್ರಿಯೆ ವೇಳೆ ಪೂರ್ವಭಾವಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಕಲಬುರ್ಗಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎಪಿಪಿ ಆಗಿರುವ ಛಾಯಾದೇವಿ ಸೇರಿದಂತೆ ರಾಜ್ಯದ ವಿವಿಧೆಡೆ ಎಪಿಪಿ ಮತ್ತು ಪ್ಲೀಡರ್‌ಗಳಾಗಿ ಕಾರ್ಯ ನಿರ್ವಹಿಸುತ್ತಿರುವ 27 ಜನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ‘ತನಿಖೆ ನಡೆಸಿದ ಪೊಲೀಸರು ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ 13 ಸಾವಿರ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದನ್ನು ಕ್ಷಣಾರ್ಧದಲ್ಲಿ ಪರಿಶೀಲಿಸಿದ ನ್ಯಾಯಾಧೀಶರು ವಿಚಾರಣೆಗೆ ಮುಂದಾಗಿದ್ದಾರೆ. ಇದು ಮಕ್ಕಿ ಕಾ ಮಕ್ಕಿ ಪ್ರಕ್ರಿಯೆಯಂತಿದೆ. ಆದ್ದರಿಂದ ವಿಚಾರಣೆಗೆ ತಡೆ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ತಡೆ ಆದೇಶ ನೀಡಿದ್ದು, ಪ್ರತಿವಾದಿಗಳಾದ ಬೆಂಗಳೂರು ಲೋಕಾಯುಕ್ತ ಡಿಎಸ್‌ಪಿ ಹಾಗೂ ದೂರುದಾರರೂ ಆದ ತೀರ್ಥಹಳ್ಳಿಯ ವಕೀಲ ಎಚ್.ಟಿ.ರವಿ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದರು. ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.