ADVERTISEMENT

ತಂಬಾಕು ಉತ್ಪನ್ನ: ಬಸ್‌ಗಳಲ್ಲಿ ಜಾಹೀರಾತು ಹಾಕದಂತೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಮೇ 2023, 21:29 IST
Last Updated 8 ಮೇ 2023, 21:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಂಬಾಕು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಸೇವನೆಯನ್ನು ಪ್ರಚೋದಿಸುವ ಜಾಹೀರಾತುಗಳನ್ನು ಬಸ್‌ಗಳಿಗೆ ಹಾಕದಂತೆ ಕ್ರಮವಹಿಸಿ ಎಂದು ಆರೋಗ್ಯ ಇಲಾಖೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಮನವಿ ಮಾಡಿಕೊಂಡಿದೆ. 

ಈ ಬಗ್ಗೆ ಇಲಾಖೆಯ ಆಯುಕ್ತ ಡಿ. ರಂದೀಪ್ ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ‘ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ (ಕೋಟ್ಪಾ) ಕಾಯ್ದೆಯಡಿ ತಂಬಾಕು ಉತ್ಪನ್ನಗಳ ಸೇವನೆಗೆ ಕಡಿವಾಣ ಹಾಕಲಾಗುತ್ತಿದೆ. ಆದರೆ, ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ವಿಮಲ್, ಕೂಲ್‌ ಲಿಪ್, ಆರ್‌ಎಂಡಿ ಸೇರಿ ವಿವಿಧ ತಂಬಾಕು ಉತ್ಪನ್ನಗಳು ಹಾಗೂ ಪಾನ್‌ ಮಸಾಲ ಉತ್ಪನ್ನಗಳ ಜಾಹೀರಾತು ಹಾಕಲಾಗುತ್ತಿದೆ’ ಎಂದು ಹೇಳಿದ್ದಾರೆ. 

‘ತಂಬಾಕು ಉತ್ಪನ್ನಗಳ ನೇರ ಮತ್ತು ಪರೋಕ್ಷ ಜಾಹೀರಾತು ನೀಡುವುದು ಕೋಟ್ಪಾ ಕಾಯ್ದೆ ಸೆಕ್ಷನ್ 5ರ ಉಲ್ಲಂಘನೆಯಾಗಿದೆ. ಬಸ್‌ಗಳಲ್ಲಿ ಹಾಕುವ ಜಾಹೀರಾತುಗಳಿಂದ ಯುವಕರು ಉತ್ತೇಜನಗೊಂಡು, ತಂಬಾಕು ಉತ್ಪನ್ನಗಳನ್ನು ಸೇವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಮುಖ ಭಾಗಿದಾರರಾದ ಸಾರಿಗೆ ಇಲಾಖೆ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು, ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳ ಸೇವನೆ ಪ್ರಚೋದಿಸುವ ಜಾಹೀರಾತುಗಳನ್ನು ಬಸ್‌ಗಳಲ್ಲಿ ಹಾಕಬಾರದು’ ಎಂದು ಮನವಿ ಮಾಡಿಕೊಂಡಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.