ADVERTISEMENT

ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶನ

5, 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದು ಪ್ರಶ್ನಿಸಿ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 22:58 IST
Last Updated 14 ಮಾರ್ಚ್ 2023, 22:58 IST

ಬೆಂಗಳೂರು: ‘ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಪ್ರಶ್ನೆಪತ್ರಿಕೆಗಳಲ್ಲಿ ಪಠ್ಯಕ್ರಮದಿಂದ ಹೊರತಾದ ಯಾವುದಾದರೂ ಪ್ರಶ್ನೆಗಳು ಇವೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲು ಪ್ರಮಾಣ ಪತ್ರ ಸಲ್ಲಿಸಿ’ ಎಂದು ಹೈಕೋರ್ಟ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿದೆ.

ಬೋರ್ಡ್‌ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ‌.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಕೆ.ವಿ.ಧನಂಜಯ ಸುದೀರ್ಘ ವಾದ ಮಂಡಿಸಿ, ‘ಕಲಿಕಾ ಚೇತರಿಕೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಾತ್ರವೇ ಅನ್ವಯ ಆಗುತ್ತದೆ. ಇದು ಪಠ್ಯಕ್ರಮದ ಭಾಗವಲ್ಲ. ಇದರನ್ವಯ ಪ್ರಶ್ನೆಗಳನ್ನು ಉತ್ತರಿಸಲು ಮಕ್ಕಳಿಗೆ ಕಷ್ಟವಾಗುತ್ತದೆ’ ಎಂದರು.

ಇದನ್ನು ಅಲ್ಲಗಳೆದ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ‘ಕಲಿಕಾ ಚೇತರಿಕೆ ಕೂಡಾ ಪಠ್ಯಕ್ರಮದ ಭಾಗವೇ ಆಗಿದೆ. ಪ್ರಶ್ನೆಪತ್ರಿಕೆಯಲ್ಲಿ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಲ್ಲ’ ಎಂದು ಸಮರ್ಥಿಸಿಕೊಂಡರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆಯುಕ್ತರು ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸಲಿ ಎಂದು ಧ್ಯಾನ್‌ ಚಿನ್ನಪ್ಪ ಅವರಿಗೆ ಸೂಚಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

ಸುತ್ತೋಲೆ ರದ್ದುಪಡಿಸುವಂತೆ ಕೋರಿ, ‘ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ‘ (ರುಪ್ಸಾ) ಹಾಗೂ ಇತರರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಇದೇ 10ರಂದು ಪುರಸ್ಕರಿಸಿತ್ತು.

ಪ್ರಕರಣವೇನು?: ಶಾಲೆಗಳಲ್ಲಿ 5,8ನೇ ತರಗತಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರವು 2022ರ ಡಿ. 12, 13 ಮತ್ತು 2023ರ ಜ. 4ರಂದು ಸುತ್ತೋಲೆ ಹೊರಡಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಲಾಗಿತ್ತು. ಈ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.