
ನೆಲಮಂಗಲ: ವೀರಶೈವ ಅಭಿವೃದ್ಧಿ ನಿಗಮಕ್ಕೆ ಈಗಾಗಲೇ ₹720 ಕೋಟಿ ಒದಗಿಸಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬಸವೇಶ್ವರ ಯುವಕ ಸಮಿತಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತ್ಯುತ್ಸವ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವದಲ್ಲಿ ಅವರು ಮಾತನಾಡಿದರು.
‘ಬೆಂಗಳೂರಿನಲ್ಲಿ ಮಹಿಳಾ ವಿದ್ಯಾರ್ಥಿನಿಲಯವನ್ನು ಎರಡು ವರ್ಷದ ಒಳಗಾಗಿ ನಿರ್ಮಿಸಲಾಗುವುದು. ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದರೆ ಬಸವಾದಿ ಪ್ರಮಥರು ವಚನ ಕ್ರಾಂತಿಯ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದರು. ಇಂತಹ ಸಮಾಜ ಕವಲು ದಾರಿಯಲ್ಲಿದೆ. ಯಾವುದೇ ಶಕ್ತಿ ವೀರಶೈವ ಲಿಂಗಾಯತರನ್ನು ವಿಘಟಿಸಲು ಸಾಧ್ಯವಿಲ್ಲ, ಸಂಘಟನೆಯಲ್ಲಿ ಬಲವಿದೆ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆ ಹೇಳಿದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ‘ನೆಲಮಂಗಲದಲ್ಲಿ ಒಟ್ಟು ಎಂಟು ಲಿಂಗಾಯತ ಮಠಗಳಿದ್ದು, ಬಸವಣ್ಣ ದೇವರ ಮಠ ಹಾಗೂ ಹೊನ್ನಮ್ಮಗವಿ ಮಠಕ್ಕೆ ತಲಾ ₹1.5 ಕೋಟಿ, ಮೇಲಣಗವಿ ಮಠಕ್ಕೆ ₹50 ಲಕ್ಷ ಸೇರಿದಂತೆ ಎಲ್ಲ ಮಠಗಳಿಗೆ ಶಾಸಕರ ಅನುದಾನದಲ್ಲಿ ಮೂಲಸೌಕರ್ಯಗಳನ್ನು ಒದಗಿಸಿದ್ದೇನೆ’ ಎಂದರು.
ಉಜ್ಜಯಿನಿ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಇಷ್ಟಲಿಂಗ ದೀಕ್ಷೆಯ ಸಂಸ್ಕಾರ ಆದ ನಂತರ ಒಳಪಂಗಡಗಳನ್ನು ಮರೆತು ಸಮಷ್ಟಿ ಪ್ರಜ್ಞೆ ಮೆರೆಯಬೇಕು ಎಂದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶ್ರೀಗಳು, ಮೇಲಣಗವಿ, ಮಹಂತಿನ ಮಠ, ಮಾಗಡಿ ಜಡೆದೇವರ ಮಠದ ಶ್ರೀಗಳು ಆಶೀರ್ವದಿಸಿದರು.
ಉಜ್ಜಯಿನಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ, ಮಹಾಶಿವಪೂಜೆ, ವೀರಗಾಸೆ ನಂದಿಧ್ವಜ ಮಂಗಳವಾದ್ಯಗಳ ಸಮೇತ ರೇಣುಕಾಚಾರ್ಯರ ಮಂಗಳಮೂರ್ತಿ ಮೆರವಣಿಗೆ, ಸಾರೋಟು ಉತ್ಸವ, ಧರ್ಮಜಾಗೃತಿ ಉತ್ಸವಗಳು ನಡೆದವು.
ಬಸವೇಶ್ವರ ಯುವಕ ಸಮಿತಿಯ ಅಧ್ಯಕ್ಷ ಎನ್.ಎಸ್.ಗಣೇಶ್, ಪದಾಧಿಕಾರಿಗಳಾದ ಪೈಲ್ವಾನ್ ಚನ್ನಬಸವರಾಜು, ಎನ್.ಜಿ. ರುದ್ರಮೂರ್ತಿ, ಎನ್.ಎಸ್.ನಟರಾಜು, ಎನ್.ಬಿ.ದಯಾಶಂಕರ್, ಎನ್.ಆರ್.ಜಗದೀಶ್, ಎನ್.ಜಿ.ಶಿವಶಂಕರ್, ಎನ್.ಪಿ.ಸಂಜಯ್, ಎಸ್.ಎನ್.ಕಾರ್ತಿಕ್, ಎನ್.ಎಂ.ಮಹೇಶ್, ಎನ್.ಎಸ್.ಚಂದ್ರಶೇಖರ್, ಎನ್.ಜೆ.ದೀಪಕ್ ಉಸ್ತುವಾರಿ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.