ರ‍್ಯಾಪಿಡೊ
ಬೆಂಗಳೂರು: ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಿರುವುದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಬೈಕ್ ಟ್ಯಾಕ್ಸಿ ಅಸೋಸಿಯೇಶನ್ ವತಿಯಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
ಓಲಾ, ಉಬರ್ ಮತ್ತು ರ‍್ಯಾಪಿಡೊ ಸಂಸ್ಥೆಗಳನ್ನು ಪ್ರತಿನಿಧಿಸುವ ಚಾಲಕರು ‘ಬೈಕ್ ಟ್ಯಾಕ್ಸಿ ಅಸೋಸಿಯೇಶನ್’ನಲ್ಲಿದ್ದಾರೆ. ಸರ್ಕಾರವು ಬೈಕ್ ಟ್ಯಾಕ್ಸಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿರುವುದರಿಂದ ಜೀವನ ನಡೆಸಲು ತೊಂದರೆಯಾಗಿದೆ. ಬೈಕ್ ಟ್ಯಾಕ್ಸಿಗಳಿಗಾಗಿ ಸ್ಪಷ್ಟ ನೀತಿ ರೂಪಿಸಬೇಕು. ವಿವಿಧ ಆಟೊ ಚಾಲಕರ ಸಂಘಗಳಿಂದ ನಡೆಯುತ್ತಿರುವ ಕಿರುಕುಳಗಳನ್ನು ಕೊನೆಗೊಳಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಸಲೀಂ ಮಾತನಾಡಿ, ‘ಬೈಕ್ ಟ್ಯಾಕ್ಸಿ ಸ್ಥಗಿತಗೊಳಿಸಿರುವುದರಿಂದ ನನಗೆ 250ರಿಂದ 300 ಚಾಲಕರು ಪ್ರತಿದಿನ ಕರೆ ಮಾಡಿ ಸಹಾಯ ಕೇಳುತ್ತಿದ್ದಾರೆ. ಅವರಿಗೆ ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಸರ್ಕಾರವು ಬೈಕ್ ಟ್ಯಾಕ್ಸಿ ಬಗ್ಗೆ ನೀತಿಯನ್ನು ಹೊಂದಿರದ ಕಾರಣಕ್ಕೆ ನಾವು ಜೀವನೋಪಾಯವನ್ನು ಕಳೆದುಕೊಳ್ಳಬೇಕೇ’ ಎಂದು ಪ್ರಶ್ನಿಸಿದರು.
‘ನಿಯಂತ್ರಣ ಇರಲಿ. ಆದರೆ, ನಿಷೇಧ ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.