
ಉನ್ನತ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಜಿ.ಶೋಭಾ, ಆಯುಕ್ತರಾದ ಎನ್. ಮಂಜುಶ್ರೀ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,
ಬೆಂಗಳೂರು: ‘ಅಪ್ರೆಂಟಿಸ್‌ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮವನ್ನು (ಎಇಡಿಪಿ) ಕಲಾ ಹಾಗೂ ವಿಜ್ಞಾನ ಪದವಿಗೂ ಪರಿಚಯಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಉನ್ನತ ಶಿಕ್ಷಣ ಇಲಾಖೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎಇಡಿಪಿ–ಪ್ರಯೋಗ, ಪ್ರಗತಿ, ಪ್ರಯೋಜನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಶಿಷ್ಯವೇತನ ಸಹಿತವಾಗಿ ಉದ್ಯೋಗಕ್ಕೆ ಪೂರಕವಾದ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ 2024ರಲ್ಲಿ ಬಿ.ಕಾಂನಲ್ಲಿ ನಾಲ್ಕು ಕೋರ್ಸ್‌ಗಳನ್ನು ಆರಂಭಿಸಲಾಯಿತು. ಇದರಲ್ಲಿ ಎರಡು ವರ್ಷ ಕಾಲೇಜು, ಮೂರನೇ ವರ್ಷ ಕೈಗಾರಿಕಾ ಆಧಾರಿತ ಅಪ್ರೆಂಟಿಸ್‌ಶಿಪ್ ಚಟುವಟಿಕೆಯಿದೆ. ಬ್ಯಾಂಕಿಂಗ್, ವಿಮೆ, ರಿಟೇಲ್, ಲಾಜಿಸ್ಟಿಕ್ ವಿಷಯದಲ್ಲಿ ಪದವಿ ನೀಡುತ್ತಿದ್ದು, ಸದ್ಯ 68 ಸರ್ಕಾರಿ ಕಾಲೇಜುಗಳಲ್ಲಿ 1,400 ವಿದ್ಯಾರ್ಥಿಗಳು ಈ ಪದವಿ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
‘ರಾಜ್ಯದಲ್ಲಿ ಇದನ್ನು ಆರಂಭಿಸಿದ ನಂತರ ವಿಶ್ವವಿದ್ಯಾಲಯ ಅನುದಾನ ಆಯೋಗ ದೇಶದಾದ್ಯಂತ ವಿಸ್ತರಿಸಿದೆ. ಉದ್ಯಮ ವಲಯದಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ವಿದ್ಯಾರ್ಥಿಗಳಲ್ಲೂ ಆಸಕ್ತಿ ಹೆಚ್ಚುತ್ತಿರುವುದರಿಂದ ಭವಿಷ್ಯದಲ್ಲಿ ಇದನ್ನು ಇನ್ನು 11 ವಲಯಗಳಿಗೆ ವಿಸ್ತರಿಸಲು ಇಲಾಖೆ ಚಿಂತನೆ ನಡೆಸುತ್ತಿದೆ’ ಎಂದರು.
‘ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸಿ ಉದ್ಯೋಗದ ಅನುಭವ, ಪ್ರಾಯೋಗಿಕ ಕಲಿಕೆಯೊಂದಿಗೆ ಶಿಷ್ಯವೇತನ ನೀಡುವ ಈ ಕಾರ್ಯಕ್ರಮದ ಕುರಿತು ನಿರ್ಲಕ್ಷ್ಯ ತೋರಬಾರದು. ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಅವಧಿಯ ಸಮರ್ಪಕ ಉಪಯೋಗ ಪಡೆಯಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದು ಹೇಳಿದರು.
ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಎಸ್.ಆರ್.ನಿರಂಜನ್ ಮಾತನಾಡಿ, ‘ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಈ ಮೊದಲೇ ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿತ್ತು. ಆ ನಂತರ ಬದಲಾವಣೆಯಾಗುತ್ತಾ ಬಂದಿತು. ಈಗ ಮತ್ತೆ ಇಂತಹ ಕೋರ್ಸ್‌ಗಳಿಗೆ ಒತ್ತು ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲೂ ನಮ್ಮ ಪದವೀಧರರನ್ನು ಉದ್ಯೋಗಕ್ಕೆ ಸಜ್ಜುಗೊಳಿಸಲು ಇದು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ ಕುಲಪತಿ ಬಿ.ರಮೇಶ್, ಕ್ರಿಸ್ಪ್ ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ್, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬು ಗೋಯಲ್ ಚೌಧರಿ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಾದ ಎನ್.ಮಂಜುಶ್ರೀ, ನಿರ್ದೇಶಕಿ ಜಿ. ಶೋಭಾ, ಜಂಟಿ ನಿರ್ದೇಶಕ ರಾಮಕೃಷ್ಣ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.