ADVERTISEMENT

ಮೆಟ್ರೊ 3ನೇ ಹಂತಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 23:06 IST
Last Updated 3 ನವೆಂಬರ್ 2022, 23:06 IST
   

ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸೇವೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವೊಂದನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, 3ನೇ ಹಂತದ ಮೆಟ್ರೊ ರೈಲು ಯೋಜನೆಗೆ ಹಣಕಾಸು ಇಲಾಖೆ ತಾತ್ವಿಕ ಅನುಮೋದನೆ ನೀಡಿದೆ.

ಮೆಟ್ರೊ 3ನೇ ಹಂತದ(ಎ) ಯೋಜನೆಯು ಎರಡು ಮಾರ್ಗಗಳನ್ನು ಒಳಗೊಂಡಿವೆ. ಪಶ್ಚಿಮದ ಹೊರ ವರ್ತುಲ ರಸ್ತೆಯಲ್ಲಿ ಕೆಂಪಾಪುರದಿಂದ ಜೆ.ಪಿ.ನಗರದ 4ನೇ ಹಂತದ ತನಕ 32.16 ಕಿಲೋ ಮೀಟರ್‌, ಮಾಗಡಿ ರಸ್ತೆಯಲ್ಲಿ ಹೊಸಹಳ್ಳಿ ಮೆಟ್ರೊ ನಿಲ್ದಾಣದಿಂದ ಕಡಬಗೆರೆ ತನಕ 12.82 ಕಿಲೋ ಮೀಟರ್‌ ಉದ್ದದ ಮಾರ್ಗ ನಿರ್ಮಾಣವಾಗಲಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಮಾದರಿಯಲ್ಲೇ ಬಾಹ್ಯ ಮೂಲಗಳಿಂದ ಶೇ 60ರಷ್ಟು ಸಾಲ, ರಾಜ್ಯ ಮತ್ತು ಕೇಂದ್ರ ಸರ್ಕಾರ ಶೇ 20ರಷ್ಟು ಭರಿಸುವ ಮೂಲಕ ಹೊಸ ಮಾರ್ಗಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಒಟ್ಟಾರೆ ₹16,368 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಕೇಂದ್ರದ ಅನುಮೋದನೆ ದೊರೆತ ಬಳಿಕ ಕಾಮಗಾರಿ ಪೂರ್ಣಗೊಳ್ಳಲು 5 ವರ್ಷ ಬೇಕಾಗಲಿದೆ.

ADVERTISEMENT

‘ರಾಜ್ಯ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದಿದ್ದೇವೆ. ನಗರಾಭಿವೃದ್ಧಿ ಇಲಾಖೆ ಕೂಡ ಒಪ್ಪಿಗೆ ನೀಡಿದ್ದು, ಈ ಇಲಾಖೆ ಮೂಲಕವೇ ಕೇಂದ್ರ ಸರ್ಕಾರಕ್ಕೆ ಒಂದು ವಾರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘‍ಪ್ರಜಾವಾಣಿ’ಗೆ ತಿಳಿಸಿದರು.

32.16 ಕಿಲೋ ಮೀಟರ್‌ನಲ್ಲಿ ಬದಲಿಸುವ(ಇಂಟರ್ ಚೇಂಜ್‌) 6 ನಿಲ್ದಾಣಗಳು ಸೇರಿ 22 ನಿಲ್ದಾಣಗಳು, 12.82 ಕಿಲೋ ಮೀಟರ್‌ ಮಾರ್ಗದಲ್ಲಿ ಸುಮನಹಳ್ಳಿ ಬಳಿ ಇಂಟರ್ ಚೇಂಜ್ ನಿಲ್ದಾಣ ಇರಲಿದೆ. ಪೀಣ್ಯದಲ್ಲಿ ಇಂಟರ್ ಚೇಂಜ್ ನಿಲ್ದಾಣ ನಿರ್ಮಿಸುವ ಪ್ರಸ್ತಾಪ ಇಲ್ಲದಿದ್ದರೂ ಎರಡು ನಿಲ್ದಾಣಗಳ ನಡುವೆ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸುಂಕದಕಟ್ಟೆ ಬಳಿ ದೊಡ್ಡ ಡಿಪೊ

3ನೇ ಹಂತದ ಈ ಹೊಸ ಯೋಜನೆಗಳನ್ನು ನಿರ್ವಹಿಸಲು ಸುಂಕದಕಟ್ಟೆ ಬಳಿ 70 ಎಕರೆ ಜಾಗದಲ್ಲಿ ಮೆಟ್ರೊ ರೈಲು ಡಿಪೊ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಲ್ಲಿನ ಎರಡನೇ ಅತಿ ದೊಡ್ಡ ಮೆಟ್ರೊ ರೈಲು ಡಿಪೊ ನಿರ್ಮಾಣವಾಗುವ ಸಾಧ್ಯತೆ ಇದೆ.

ಪೀಣ್ಯ ಹೊರತುಪಡಿಸಿದರೆ ಹಾಲಿ ಕಾರ್ಯಾಚರಣೆಯಲ್ಲಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಡಿಪೊಗಳು 40 ಎಕರೆಗಿಂತ ಹೆಚ್ಚಿನ ಜಾಗದಲ್ಲಿ ಇಲ್ಲ. ಆದರೆ, ಈ ಜಾಗ ವಿವಾದದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.