ADVERTISEMENT

ಸಂತ್ರಸ್ತ ಫಲಾನುಭವಿಗಳಿಗೆ ಹೊಸ ವರ್ಷದಲ್ಲಿ ನಿವೇಶನ: ಬಿಡಿಎ ಅಧ್ಯಕ್ಷ ಸೂಚನೆ

ಅರ್ಕಾವತಿ ಬಡಾವಣೆ: ಬಿಕ್ಕಟ್ಟು ಬಗೆಹರಿಸುವಂತೆ ಅಧಿಕಾರಿಗಳಿಗೆ ಬಿಡಿಎ ಅಧ್ಯಕ್ಷ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 14:34 IST
Last Updated 15 ಡಿಸೆಂಬರ್ 2020, 14:34 IST
ಎಸ್‌.ಆರ್‌.ವಿಶ್ವನಾಥ್
ಎಸ್‌.ಆರ್‌.ವಿಶ್ವನಾಥ್   

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಸಿಗದೇ ಸಮಸ್ಯೆ ಎದುರಿಸುತ್ತಿರುವ ಅರ್ಹ ಫಲಾನುಭವಿಗಳಿಗೆ ಜ್ಯೇಷ್ಠತೆ ಆಧಾರದಲ್ಲಿ ಹೊಸ ವರ್ಷಾರಂಭದಲ್ಲಿ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಂಗಳವಾರ ಚರ್ಚಿಸಿದ ಅವರು, ನಿವೇಶನ ಹಂಚಿಕೆ ಕುರಿತ ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆದರು.

‘ನಿವೇಶನಕ್ಕಾಗಿ ಹಣ ಪಾವತಿ ಮಾಡಿರುವ ಜನರು ದಶಕದ ಬಳಿಕವೂ ಅದನ್ನು ದಕ್ಕಿಸಿಕೊಳ್ಳಲು ಬಿಡಿಎ ಕಚೇರಿಗೆ ಅಲೆಯುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯೂ ಸೇರಿದಂತೆ ಇತರ ಬಡಾವಣೆಗಳಲ್ಲಿ ಬದಲಿ ನಿವೇಶನ ನೀಡಲಾಗಿದೆ. ಅರ್ಕಾವತಿ ಬಡಾವಣೆಯಲ್ಲಿ ಯಾವುದೇ ಕಾನೂನು ತೊಡಕು ಇಲ್ಲದ ಜಾಗಗಳನ್ನು ಅಭಿವೃದ್ಧಿಪಡಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ಅಭಿವೃದ್ಧಿಪಡಿಸಬೇಕು. ಎಷ್ಟು ಫಲಾನುಭವಿಗಳಿಗೆ ನಿವೇಶನಗಳನ್ನು ನೀಡಬಹುದು ಮತ್ತು ಯಾವ ಅಳತೆಯ ನಿವೇಶನಗಳನ್ನು ನೀಡಬಹುದು ಎಂಬುದರ ಬಗ್ಗೆ ವಿವರವಾದ ವರದಿಯನ್ನು ಡಿ. 30 ರೊಳಗೆ ಸಿದ್ಧಪಡಿಸಬೇಕು’ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

‘ಈ ವರದಿ ಆಧರಿಸಿ 2021ರ ಜನವರಿ ಅಂತ್ಯದ ವೇಳೆಗೆ ಅರ್ಕಾವತಿಯಲ್ಲಿ ಲಭ್ಯವಿರುವ ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಈ ಬಡಾವಣೆ ಅಭಿವೃದ್ಧಿಯಲ್ಲಿ ಹಾಗೂ ನಿವೇಶನ ಹಂಚಿಕೆಯಲ್ಲಿ ಆಗಿರುವ ಲೋಪಗಳಿಂದಾಗಿ ಬಿಡಿಎಗೆ ಕೆಟ್ಟ ಹೆಸರು ಬರುವಂತಾಗಿದೆ. ಈ ಕಳಂಕವನ್ನು ನಿವಾರಿಸಲು ಇನ್ನಾದರೂ ದಕ್ಷತೆಯಿಂದ ಕೆಲಸ ಮಾಡಿ’ ಎಂದು ವಿಶ್ವನಾಥ್ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಈ ಸಭೆಯಲ್ಲಿ ಬಿಡಿಎ ಕಾರ್ಯದರ್ಶಿ ವಾಸಂತಿ ಅಮರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಕಾವತಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿದ್ದ ಅನೇಕ ಪ್ರದೇಶಗಳನ್ನು ಸರ್ಕಾರ ಡಿನೋಟಿಫೈ ಮಾಡಿದೆ. ಇದನ್ನು ಪ್ರಶ್ನಿಸಿ ಅನೇಕ ಫಲಾನುಭವಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕೆಲವು ಪ್ರಕರಣಗಳಲ್ಲಿ ಭೂಸ್ವಾಧೀನ ಪ್ರಶ್ನಿಸಿ ಹಾಗೂ ಭೂಮಾಲೀಕರು ಹೈಕೋರ್ಟ್‌ ಮಟ್ಟಿಲೇರಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಅಧಿಕಾರಿಗಳು ನೂರಾರು ಸ್ವತ್ತುಗಳನ್ನು ಭೂಮಾಲೀಕರಿಗೆ ಮರಳಿಸಿದ್ದಾರೆ. ಇದರಿಂದಾಗಿ ಈ ಬಡಾವಣೆಯಲ್ಲಿ ನಿವೇಶನಗಳ ಅಭಿವೃದ್ಧಿ ಮತ್ತು ಹಂಚಿಕೆ ಗೊಂದಲದ ಗೂಡಾಗಿದೆ. ನಿವೇಶನಕ್ಕಾಗಿ 15 ವರ್ಷಗಳ ಹಿಂದೆಯೇ ಶುಲ್ಕ ಪಾವತಿ ಮಾಡಿದ್ದರೂ ಫಲಾನುಭವಿಗಳು ಈಗಲೂ ಅವುಗಳನ್ನು ಪಡೆಯಲು ಬಿಡಿಎ ಕಚೇರಿಗೆ ಅಲೆಯಬೇಕಾದ ಸ್ಥಿತಿ ಇದೆ.

‘ನಕಲಿ ದಾಖಲೆ ಸೃಷ್ಟಿ–ತನಿಖೆಗೆ ವಿಶೇಷ ತಂಡ’

‘ಬಿಡಿಎ ದಾಖಲೆಗಳನ್ನು ಅಕ್ರಮವಾಗಿ ಸೃಷ್ಟಿಸಿರುವ ಹಗರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗುತ್ತದೆ. ಈ ಕುರಿತು ಶೀಘ್ರವೇ ಸರ್ಕಾರ ಆದೇಶ ಹೊರಡಿಸಲಿದೆ’ ಎಂದು ಎಸ್‌.ಆರ್‌.ವಿಶ್ವನಾಥ್ ತಿಳಿಸಿದರು. ‘ಈ ಪ್ರಕರಣ ಸಂಬಂಧ ಆರು ಮಂದಿ ಜೈಲು ಸೇರಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.