ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ 515 ಭೂಸೇನಾ ಕಾರ್ಯಾಗಾರದ ಕಾರ್ಮಿಕರ ಸಂಘ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಮೀವುಲ್ಲಾ ಖಾನ್, ‘ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಎಂಟನೇ ವೇತನ ಆಯೋಗವನ್ನು ರಚಿಸಬೇಕು. ಕೇಂದ್ರ ಸರ್ಕಾರದ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ, ಇಲಾಖೆಗಳ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.
‘ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಕೇಂದ್ರ ನೌಕರರ ಗುಂಪು ವಿಮಾ ಯೋಜನೆ 1980 ಅನ್ನು ಪರಿಷ್ಕರಿಸಬೇಕು. ವಿಮಾ ಮೊತ್ತವನ್ನು ಕನಿಷ್ಠ ₹15 ಲಕ್ಷಕ್ಕೆ ನಿಗದಿಪಡಿಸಬೇಕು. ಪಿಂಚಣಿ ಕಮ್ಯುಟೇಶನ್ ಅನ್ನು 15 ವರ್ಷಗಳ ಬದಲಿಗೆ 12 ವರ್ಷಕ್ಕೆ ನಿಗದಿಪಡಿಸಬೇಕು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪುನರುಜ್ಜೀವನದ ಕುರಿತು ಪ್ರೊ.ಕೆ. ವಿಜಯ ರಾಘವನ್ ಸಮಿತಿಯು ನೌಕರರ ಹಾಗೂ ಸಂಸ್ಥೆಗಳ ವಿರುದ್ಧ ಮಾಡಿರುವ ಶಿಫಾರಸುಗಳನ್ನು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ರಾಷ್ಟ್ರೀಯ ಸದಸ್ಯ ತಿರುಕುಮಾರ್, ಪ್ರಧಾನ ಕಾರ್ಯದರ್ಶಿ ಭಗತ್‌ಸಿಂಗ್ ಭಿಷ್ಟ, ಉಪಾಧ್ಯಕ್ಷರಾದ ವರಲಕ್ಷ್ಮಿ, ಗಿರೀಶ ಡಿ.ಸಿ., ಸುರೇಶ್ ಕೆ.ಎಸ್., ಆದಿತ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.