ADVERTISEMENT

ಸ್ನೇಹಿತೆ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದವ ಬಂಧನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 20:51 IST
Last Updated 16 ಏಪ್ರಿಲ್ 2021, 20:51 IST

ಬೆಂಗಳೂರು: ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಆರೋಪಿ ಸಂಜಯ್ ಅಲಿಯಾಸ್ ಬಿ.ಕೆ. ಸಿದ್ದಪ್ಪ (38) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯ ಜಿಲ್ಲೆಯ ದೊಡ್ಡ ಬಾಣಸವಾಡಿಯ ಸಂಜಯ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಚಿಕ್ಕಬಾಣಾವರದಲ್ಲಿ ನೆಲೆಸಿದ್ದ. ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದ. ಆತನಿಂದ ₹ 18 ಲಕ್ಷ ಮೌಲ್ಯದ ಚಿನ್ನಾಭರಣ, ಇನ್ನೋವಾ ಕಾರು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘2015ರಲ್ಲಿ ಚಿಕ್ಕಬಾಣಾವರದ ಚಂದ್ರಕಲಾ ಟ್ರಾವೆಲ್ಸ್‌ ಕಂಪನಿಯಲ್ಲಿ ವ್ಯವಸ್ಥಾಪಕನಾಗಿ ಆರೋಪಿ ಕೆಲಸ ಮಾಡುತ್ತಿದ್ದ. ಅದೇ ಸಂದರ್ಭದಲ್ಲೇ ಆತನಿಗೆ ದೂರುದಾರರ ಪರಿಚಯವಾಗಿ ಸ್ನೇಹ ಏರ್ಪಟ್ಟಿತ್ತು. ಸ್ನೇಹಿತೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ.’

ADVERTISEMENT

‘2020ರ ಆಗಸ್ಟ್ 18ರಂದು ಸಂಜೆ ಸ್ನೇಹಿತೆ ಮನೆಗೆ ಹೋಗಿದ್ದ ಆರೋಪಿ, ಕುಶಲೋಪರಿ ವಿಚಾರಿಸಿದ್ದ. ಕೆಲಸ ನಿಮಿತ್ತ ಸ್ನೇಹಿತೆ, ಅವಸರದಲ್ಲಿ ಮನೆಯಿಂದ ಹೋಗಿದ್ದರು. ತಾವು ವಾಪಸು ಬರುವವರೆಗೂ ಮನೆಯಲ್ಲೇ ಕುಳಿತುಕೊಳ್ಳುವಂತೆ ಸಂಜಯ್‌ಗೆ ಹೇಳಿದ್ದರು. ಸ್ನೇಹಿತೆ ಸಂಜೆ ಮನೆಗೆ ಬಂದಾಗ ಆರೋಪಿ ಇರಲಿಲ್ಲ. ಕೊಠಡಿಯ ಮಂಚದ ಮೇಲಿದ್ದ ಚಿನ್ನಾಭರಣವೂ ಕಾಣಿಸಿರಲಿಲ್ಲ.’

‘ಮನೆಗೆ ಬಂದಿದ್ದ ಸಂಜಯ್‌ನೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತಪಡಿಸಿ ಸ್ನೇಹಿತೆ ಠಾಣೆಗೆ ದೂರು ನೀಡಿದ್ದರು. ಆರೋಪಿ ತಲೆಮರೆಸಿಕೊಂಡಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಠಾಣೆ ವ್ಯಾಪ್ತಿಯ ಮಂಜುನಾಥನಗರದ ಬಸ್ ತಂಗುದಾಣ ಸಮೀಪ ಏಪ್ರಿಲ್ 4ರಂದು ಆರೋಪಿ ಕಾಣಿಸಿಕೊಂಡಿದ್ದ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಆತನನ್ನು ಬಂಧಿಸಲಾಯಿತು. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆರೋಪಿ, ಪರಿಚಯಸ್ಥರ ಇನ್ನೋವಾ ಕಾರು ಹಾಗೂ ಬೈಕ್ ಕದ್ದಿರುವುದು ತನಿಖೆಯಿಂದ ತಿಳಿಯಿತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.