ADVERTISEMENT

ಮಾಸಾಶನಕ್ಕಾಗಿ ಕಲಾವಿದರ ಸಂಕಟ, ಕೆಲವರಿಗೆ ನೆರವು ಕೈತಪ್ಪುವ ಆತಂಕ

ಮತ್ತೆ ದಾಖಲಾತಿ ಕೇಳಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ವರುಣ ಹೆಗಡೆ
Published 11 ಜುಲೈ 2020, 20:47 IST
Last Updated 11 ಜುಲೈ 2020, 20:47 IST

ಬೆಂಗಳೂರು: ಮಾಸಾಶನಕ್ಕಾಗಿ ಮತ್ತೆ ದಾಖಲೆಗಳನ್ನು ಸಲ್ಲಿಸಬೇಕು ಎಂದುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಸೂಚಿಸಿದೆ. ಈ ಮೂಲಕ ಇಲಾಖೆಯು ಕೊರೊನಾ ಕಾಲದಲ್ಲಿ ಕಲಾವಿದರನ್ನು ಸಂಕಷ್ಟಕ್ಕೆ ದೂಡಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಈಗಾಗಲೇ ಮಾಸಾಶನ ಪಡೆಯುತ್ತಿರುವವರೂ ಪುನಃ ದಾಖಲಾತಿಗಳನ್ನು ಸಲ್ಲಿಸಲು ಇಲಾಖೆ ಸೂಚಿಸಿದ್ದು, ಪರಿಶೀಲನೆ ಪ್ರಾರಂಭಿಸಿದೆ. ಇದರಿಂದಾಗಿ ಇಳಿವಯಸ್ಸಿನ ಕಲಾವಿದರು ಜಿಲ್ಲಾ ಸಹಾಯಕ ನಿರ್ದೇಶಕರ ಕಚೇರಿಗೆ ಅಲೆಯಬೇಕಾಗಿದೆ.

ಸಂಗೀತ, ನೃತ್ಯ, ನಾಟಕ, ಜಾನಪದ, ಯಕ್ಷಗಾನ, ಬಯಲಾಟ, ಸಾಹಿತ್ಯ, ಲಲಿತ ಕಲೆ, ಶಿಲ್ಪ ಕಲೆ ಸೇರಿದಂತೆ ವಿವಿಧ ಕಲಾ ಹಾಗೂ ಸಾಹಿತ್ಯ ಪ್ರಕಾರದಲ್ಲಿ ಸೇವೆ ಸಲ್ಲಿಸಿ, ಕಷ್ಟದ ಪರಿಸ್ಥಿತಿಯಲ್ಲಿರುವ ಹಿರಿಯ ಸಾಹಿತಿಗಳು ಮತ್ತು ಕಲಾವಿದರಿಗೆ ಅವರ ಜೀವಿತಾವಧಿವರೆಗೆ ಮಾಸಾಶನ ನೀಡಲಾಗುತ್ತಿದೆ. ಇದುವರೆಗೆ ಕಲಾವಿದರು, ಸಾಹಿತಿಗಳ ಬ್ಯಾಂಕ್ ಖಾತೆಗಳಿಗೆ ಖಜಾನೆಯಿಂದ ನೇರವಾಗಿ ಹಣ ಪಾವತಿಸಲಾಗುತ್ತಿತ್ತು. ಈಗ ಇಲಾಖೆ ಮೂಲಕವೇ ಹಣ ಜಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ನಿರ್ದಿಷ್ಟ ಪಟ್ಟಿ ಇಲ್ಲದ ಹಿನ್ನೆಲೆಯಲ್ಲಿ ಇಲಾಖೆಯು, ಕಲಾವಿದರು ಹಾಗೂ ಸಾಹಿತಿಗಳ ದಾಖಲಾತಿಗಳನ್ನು ಮರುಪರಿಶೀಲಿಸಲು ಪ್ರಾರಂಭಿಸಿದೆ.

ADVERTISEMENT

ಈಗಾಗಲೇ ಪ್ರತಿ ತಿಂಗಳು ₹1,500 ಮಾಸಾಶನ ಪಡೆಯುತ್ತಿರುವ ಕಲಾವಿದರು ಹಾಗೂ ಸಾಹಿತಿಗಳು ಕೂಡ ಅಗತ್ಯ ದಾಖಲಾತಿಗಳನ್ನು ಮತ್ತೊಮ್ಮೆ ಸಲ್ಲಿಸಬೇಕೆಂದು ಇಲಾಖೆ ತಿಳಿಸಿದೆ. ಈ ಹಿಂದೆಯೇ ದಾಖಲಾತಿಗಳನ್ನು ಸಲ್ಲಿಸಿದ್ದರೂ ಮತ್ತೊಮ್ಮೆ ಪರಿಶೀಲನೆ ನಡೆಸುತ್ತಿರುವುದಕ್ಕೆ ಹಿರಿಯ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಬರುತ್ತಿದ್ದ ಅಲ್ಪ ಕಾಸು ಕೂಡಇದರಿಂದ ಕೈತಪ್ಪಲಿದೆಯೇ ಎಂಬ ಆತಂಕವೂ ಕಷ್ಟದಲ್ಲಿರುವ ಕಲಾವಿದರನ್ನು ಕಾಡುತ್ತಿದೆ.

ಅಕಾಡೆಮಿ ಬಳಿಯೂ ವಿವರಗಳಿಲ್ಲ: ವಿವಿಧ ಕಲೆ, ಸಾಹಿತ್ಯ ಪ್ರಕಾರಗಳಿಗಾಗಿ ಪ್ರತ್ಯೇಕವಾಗಿ 13 ಅಕಾಡೆಮಿಗಳು ಹಾಗೂ 3 ಪ್ರಾಧಿಕಾರಗಳಿದ್ದು, ಮಾಸಾಶನ ಪಟ್ಟಿ ಅಂತಿಮಗೊಳಿಸುವಾಗ ಫಲಾನುಭವಿಗಳ ಸಂದರ್ಶನವನ್ನು ಈ ಅಕಾಡೆಮಿಗಳೇ ನಡೆಸುತ್ತಿದ್ದವು. ಆದರೆ, ಮಾಸಾಶನ ಪಡೆಯುತ್ತಿರುವವರ ವಿವರ ಅವುಗಳಲ್ಲೂ ಲಭ್ಯವಿಲ್ಲ.

‘ಹಲವು ವರ್ಷಗಳಿಂದ ಮಾಸಾಶನ ಪಡೆದುಕೊಳ್ಳುತ್ತಿದ್ದೇನೆ. ಈಗ ಪುನಃ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್‌ ಸೇರಿದಂತೆ
ವಿವಿಧ ದಾಖಲಾತಿಗಳನ್ನು ಅಧಿಕಾರಿಗಳು ಕೇಳುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಮತ್ತೆ ಕಚೇರಿಗೆ ಅಲೆಯುವುದು ಕಷ್ಟ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಲಾವಿದರೊಬ್ಬರು ಬೇಸರ ವ್ಯಕ್ತಪಡಿಸಿದರು.

***

ಇನ್ನುಮುಂದೆ ಇಲಾಖೆಯಿಂದಲೇ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಲಿದೆ. ಕಲಾವಿದರಿಂದ ದಾಖಲಾತಿ ಸಂಗ್ರಹಿಸುತ್ತಿದ್ದೇವೆ. ಮಾಸಾಶನಕ್ಕೆ ಸಮಸ್ಯೆ ಆಗುವುದಿಲ್ಲ

-ಎಸ್.ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

***

ಅಂಕಿ–ಅಂಶಗಳು

₹ 1,500ಮಾಸಿಕ ನೀಡುವ ಮಾಸಾಶನ ಮೊತ್ತ

15 ಸಾವಿರಮಾಸಾಶನ ‍ಪಡೆಯುತ್ತಿರುವ ಕಲಾವಿದರು, ಸಾಹಿತಿಗಳು

30 ಸಾವಿರಆರ್ಥಿಕ ನೆರವಿಗೆ ಅರ್ಜಿಸಲ್ಲಿಸಿರುವ ಕಲಾವಿದರು

17 ಸಾವಿರಆರ್ಥಿಕ ನೆರವು ಪಡೆದ ಕಲಾವಿದರು

₹ 4 ಕೋಟಿಆರ್ಥಿಕ ನೆರವಿಗೆ ಸರ್ಕಾರ ಮಂಜೂರು ಮಾಡಿರುವ ಅನುದಾನ

‘ನೆರವು ನೀಡುವಲ್ಲಿಯೂ ಗೊಂದಲ’

ಕಲಾವಿದರು ಹಾಗೂ ಸಾಹಿತಿಗಳ ಪಟ್ಟಿ ಇಲ್ಲದ ಪರಿಣಾಮ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ್ದ ತಲಾ ₹ 2 ಸಾವಿರ ಆರ್ಥಿಕ ನೆರವು ಹಂಚಿಕೆಯೂ ಗೊಂದಲಮಯವಾಗಿದೆ.

10 ವರ್ಷಗಳು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ, ಇಲಾಖೆಯಿಂದ ಮಾಸಾಶನ ಪಡೆಯದ ಕಲಾವಿದರು ನೆರವು ಪಡೆಯಲು ಅರ್ಹರಾಗಿರುತ್ತಾರೆ ಎಂಬ ನಿಯಮವನ್ನೂ ರೂಪಿಸಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಅರ್ಜಿಗಳು ಬಂದಿದ್ದು, ಅರ್ಹರ ಆಯ್ಕೆ ಅಧಿಕಾರಿಗಳಿಗೆ ಸವಾಲಾಗಿದೆ. ಮಾಸಾಶನ ಪಡೆಯುತ್ತಿದ್ದ ಕಲಾವಿದರು ಕೂಡ ಇದಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.