ADVERTISEMENT

ಬಡ್ತಿ ಕೊಟ್ಟರೂ ಆರ್‌ಟಿಒ ಹುದ್ದೆಗೆ ಹೋಗದ ಅಧಿಕಾರಿ

ಚಾಲನೆ ನೋಡದೇ ಪರವಾನಗಿ ನೀಡಿದ್ದ ಆರೋಪ ಎದುರಿಸುತ್ತಿರುವ ಕೃಷ್ಣಾನಂದ

ಬಾಲಕೃಷ್ಣ ಪಿ.ಎಚ್‌
Published 11 ಆಗಸ್ಟ್ 2023, 20:17 IST
Last Updated 11 ಆಗಸ್ಟ್ 2023, 20:17 IST
ಆರ್‌ಟಿಒ ಚೆಕ್‌ಪೋಸ್ಟ್‌
ಆರ್‌ಟಿಒ ಚೆಕ್‌ಪೋಸ್ಟ್‌   

ಬೆಂಗಳೂರು: ಸಿಕ್ಕಿದ ಬಡ್ತಿಯನ್ನು ನಿರಾಕರಿಸದೇ, ವರ್ಗಾವಣೆ ಮಾಡಿದ ಸ್ಥಳಕ್ಕೂ ಹೋಗದ ಎಆರ್‌ಟಿಒ ಜಿ.ಪಿ. ಕೃಷ್ಣಾನಂದ ಅವರು ಜ್ಞಾನಭಾರತಿ ಆರ್‌ಟಿಒ ಕಚೇರಿಯಲ್ಲೇ ಉಳಿದಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೃಷ್ಣಾನಂದ ಅವರು ಹಿಂದೆ ಎಲೆಕ್ಟ್ರಾನಿಕ್‌ಸಿಟಿ ಆರ್‌ಟಿಒ ಕಚೇರಿಯಲ್ಲಿ ಎಆರ್‌ಟಿಒ ಆಗಿದ್ದಾಗ ನಿತ್ಯ 500–1000 ಚಾಲನಾ ಅನುಜ್ಞಾ ಪತ್ರಗಳನ್ನು (ಡಿಎಲ್‌) ನೀಡಿದ್ದ ಆರೋಪದಲ್ಲಿ ಕಳೆದ ಜನವರಿಯಲ್ಲಿ ಅಮಾನತ್ತಾಗಿದ್ದರು. ಬಳಿಕ ವಿಚಾರಣೆಯನ್ನು ಬಾಕಿ ಇಟ್ಟು ಒಂದೇ ತಿಂಗಳಲ್ಲಿ ಅಮಾನತು ತೆರವು ಮಾಡಿ ಜ್ಞಾನಭಾರತಿ ಆರ್‌ಟಿಒ ಕಚೇರಿಯಲ್ಲಿ ಖಾಲಿ ಇರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿಯುಕ್ತಿಗೊಳಿಸಲಾಗಿತ್ತು.

ಅವರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ(ಆರ್‌ಟಿಒ) ಬಡ್ತಿ ನೀಡಿ ಶಾಂತಿನಗರ ಪ್ರಾದೇಶಿಕ ಸಾರಿಗೆ ಕಚೇರಿಗೆ ಜೂನ್‌ 27ರಂದು ವರ್ಗಾವಣೆ ಮಾಡಲಾಗಿತ್ತು. ಈವರೆವಿಗೂ ಅವರು ವರ್ಗಾವಣೆಯಾದ ಕಚೇರಿಗೆ ವರದಿ ಮಾಡಿಕೊಂಡಿಲ್ಲ. ಜ್ಞಾನಭಾರತಿಯಲ್ಲೇ ಎಆರ್‌ಟಿಒ ಆಗಿ ಮುಂದುವರಿದಿದ್ದಾರೆ.

ADVERTISEMENT

‘ಡಿಎಲ್‌ ನೀಡಬೇಕಿದ್ದರೆ ಚಾಲನೆ ಮಾಡಿಸಿ ಪರೀಕ್ಷಿಸಬೇಕು. ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಡಿಎಲ್‌ ಪಡೆಯಲು ಅರ್ಜಿದಾರರು ಅರ್ಹರಾಗುತ್ತಾರೆ. ಅಂಥ ಯಾವ ಪರೀಕ್ಷೆಗಳನ್ನೂ ಮಾಡದೇ ಡಿಎಲ್‌ ನೀಡಿದ್ದ ಆರೋಪದಲ್ಲಿ ಕೃಷ್ಣಾನಂದ ಅಮಾನತಾಗಿದ್ದರು. ಈಗ ವರ್ಗಾವಣೆ ಮಾಡಿದರೂ ಶಾಂತಿನಗರಕ್ಕೆ ಹೋಗಿಲ್ಲ. ಯಾಕೆಂದರೆ ಅದು ಆಟೊ ರಿಕ್ಷಾ ವಿಭಾಗ. ಅದನ್ನು ಬಿಟ್ಟು ಡಿಎಲ್‌ ನೀಡುವ ಅವಕಾಶ ಇರುವ ಜಾಗ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ. ಇದು ಮತ್ತೊಂದು ಹಗರಣಕ್ಕೆ ಕಾರಣವಾಗಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಬಡ್ತಿ ನೀಡಿ ವರ್ಗಾವಣೆ ಮಾಡಿದಾಗ ಅಲ್ಲಿಗೆ ಹೋಗಿ ವರದಿ ಮಾಡಿಕೊಂಡಾಗ ಬಡ್ತಿ ಅನ್ವಯವಾಗುತ್ತದೆ. ಬಡ್ತಿ ನಿರಾಕರಿಸಿ ಮುಂದುವರಿಯುವ ಅವಕಾಶವೂ ಇದೆ. ಕೃಷ್ಣಾನಂದ ಅವರು ಬಡ್ತಿ ನಿರಾಕರಿಸಿಲ್ಲ. ಇಲ್ಲಿ ವರದಿ ಮಾಡಿಕೊಂಡಿಲ್ಲ. ಮುಂದೆ ಮಾಡಿಕೊಳ್ಳಬಹುದು’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.