ADVERTISEMENT

ಮಗನ ಮೇಲಿನ ಸಿಟ್ಟಿಗೆ ಹಸುಗೂಸನ್ನೇ ಕೊಂದಳು

ತಿಂಗಳ ಹಸುಳೆ ಕೊಲೆ ಪ್ರಕರಣ ಭೇದಿಸಿದ ಪೊಲೀಸರು l ಮಗುವಿನ ಅಜ್ಜಿ ವಿಜಯಲಕ್ಷ್ಮಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:55 IST
Last Updated 25 ಡಿಸೆಂಬರ್ 2018, 19:55 IST
ಕೊಲೆಯಾದ ಮಗು
ಕೊಲೆಯಾದ ಮಗು   

ಬೆಂಗಳೂರು: ನೀಲಸಂದ್ರದಲ್ಲಿ ನಡೆದಿದ್ದ ಒಂದು ತಿಂಗಳ ಹಸುಳೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಅಶೋಕನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ‘ಅಜ್ಜಿ ವಿಜಯಲಕ್ಷ್ಮಿಯೇ ಮಗುವನ್ನು ಕೊಂದು ಶವವನ್ನುಮಂಚದ ಕೆಳಗೆ ಬಚ್ಚಿಟ್ಟಿದ್ದಳು’ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಕಾರ್ತಿಕ್– ಸ್ಟೆಲ್ಲಾ ದಂಪತಿಯ ಮಗುವನ್ನು ಡಿ. 21ರಂದು ಕೊಲೆ ಮಾಡಲಾಗಿತ್ತು. ಕಾರ್ತಿಕ್ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು, ಆರೋಪಿ ವಿಜಯಲಕ್ಷ್ಮಿಯನ್ನು ಮಂಗಳವಾರ ಬಂಧಿಸಿದ್ದಾರೆ.

‘ದಂಪತಿ ವಾಸವಿದ್ದ ಮನೆಯಲ್ಲೇ ಕೃತ್ಯ ನಡೆದಿತ್ತು. ಮನೆಯವರೇ ಕೃತ್ಯ ನಡೆಸಿದ್ದಾರೆ ಎಂಬ ಅನುಮಾನವಿತ್ತು. ಮಗುವಿನ ತಂದೆ–ತಾಯಿ, ಅಜ್ಜ–ಅಜ್ಜಿ ಹಾಗೂ ಸಂಬಂಧಿಕರೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೆವು. ಅಜ್ಜಿ ವಿಜಯಲಕ್ಷ್ಮಿ ತಪ್ಪೊಪ್ಪಿಕೊಂಡಳು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕಾರ್ತಿಕ್ ಹಾಗೂಸ್ಟೆಲ್ಲಾ, ಪರಸ್ಪರ ಪ್ರೀತಿಸಿ 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕಾರ್ತಿಕ್, ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಿತ್ಯವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಮಗನ ವರ್ತನೆಯಿಂದ ಸಿಟ್ಟಾಗಿದ್ದ ವಿಜಯಲಕ್ಷ್ಮಿ ಮಗನ ಜೊತೆ ಆಗಾಗ ಜಗಳ ಮಾಡುತ್ತಿದ್ದಳು. ಅವಳಿ ಮಕ್ಕಳಾಗುತ್ತಿದ್ದಂತೆ ಕಾರ್ತಿಕ್‌ ವರ್ತನೆ ಮಿತಿಮೀರಿತ್ತು. ದಂಪತಿ ಹಾಗೂ ಮಕ್ಕಳನ್ನು ಸಾಕುವ ಜವಾಬ್ದಾರಿಯೂ ವಿಜಯಲಕ್ಷ್ಮಿ ಮೇಲೆ ಬಿದ್ದಿತ್ತು. ಎಷ್ಟೇ ಬುದ್ಧಿವಾದ ಹೇಳಿದರೂ ಕಾರ್ತಿಕ್‌ ಬದಲಾಗಿರಲಿಲ್ಲ. ಮಗನ ಮೇಲಿನ ಸಿಟ್ಟನ್ನು ಆರೋಪಿ, ತಿಂಗಳ ಮಗುವನ್ನೇ ಕೊಂದು ತೀರಿಸಿಕೊಂಡಿದ್ದಾಳೆ’ ಎಂದು ಮಾಹಿತಿ ನೀಡಿದರು.

ವೇಲ್‌ನಿಂದ ಕುತ್ತಿಗೆ ಬಿಗಿದಿದ್ದಳು:‘ದಂಪತಿಯ ಇಬ್ಬರು ಮಕ್ಕಳ ಪೈಕಿ ಒಂದು ಮಗುವಿಗೆ ಹುಷಾರಿರಲಿಲ್ಲ. ಸ್ಟೆಲ್ಲಾ ಅವರೇ ಆ ಮಗುವನ್ನು ಡಿ. 21ರಂದು ಮಧ್ಯಾಹ್ನ ವೈದ್ಯರ ಬಳಿ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ‘ಮಗು ಚೆನ್ನಾಗಿದೆ’ ಎಂದು ಹೇಳಿ ಕಳುಹಿಸಿದ್ದರು. ಸಂಜೆ 5.15ಕ್ಕೆ ಮನೆಗೆ ಬಂದಿದ್ದ ತಾಯಿ, ಮಗುವನ್ನು ನಡುಮನೆಯ ಮಂಚದ ಮೇಲೆ ಮಲಗಿಸಿ ಶೌಚಾಲಯಕ್ಕೆ ಹೋಗಿದ್ದರು. ಕಾರ್ತಿಕ್, ಔಷಧ ತರಲು ಹೊರಗಡೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಅದೇ ವೇಳೆಯೇ ಮಗುವಿನ ಕುತ್ತಿಗೆಯನ್ನು ವೇಲ್‌ನಿಂದ ಬಿಗಿದಿದ್ದ ವಿಜಯಲಕ್ಷ್ಮಿ, ಉಸಿರುಗಟ್ಟಿಸಿ ಕೊಂದಿದ್ದಳು. ಶವವನ್ನು ಬಟ್ಟೆಯಲ್ಲಿ ಸುತ್ತಿ ಮಂಚದ ಕೆಳಗೆ ಇಟ್ಟಿದ್ದಳು. 10 ನಿಮಿಷದ ಬಳಿಕ ಹೊರಗೆ ಬಂದ ಸ್ಟೆಲ್ಲಾ, ಇನ್ನೊಂದು ಮಗುವನ್ನು ಎತ್ತಿಕೊಂಡು ಆಟವಾಡಿಸುತ್ತಿದ್ದಳು.’

‘ನಾನು ವಾಕಿಂಗ್ ಹೋಗಿ ಬರುತ್ತೇನೆ’ ಎಂದು ಹೇಳಿ ವಿಜಯಲಕ್ಷ್ಮಿ ಹೊರಗಡೆ ಹೋಗಿದ್ದಳು. ನಿಮಿಷದ ನಂತರ ಸ್ಟೆಲ್ಲಾ, ನಡುಮನೆಗೆ ಹೋಗಿ ನೋಡಿದಾಗ ಮಂಚದ ಮೇಲೆ ಮಗು ಇರಲಿಲ್ಲ. ಗಾಬರಿಗೊಂಡ ತಾಯಿ, ಪತಿಗೂ ವಿಷಯ ತಿಳಿಸಿ ಮಗುವಿಗಾಗಿ ಹುಡುಕಾಟ ನಡೆಸಿದ್ದರು. ನಿಯಂತ್ರಣ ಕೊಠಡಿಗೂ ಕರೆ ಮಾಡಿದ್ದರು.ರಾತ್ರಿ 7.30ಕ್ಕೆ ಮನೆಗೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದರು.’

‘ಅದೇ ವೇಳೆ ಮಂಚದ ಕೆಳಗೆ ನೋಡಿದ್ದ ಕಾರ್ತಿಕ್‌ ತಂದೆಗೆ ಮಗು ಕಾಣಿಸಿತ್ತು.ಅದರ ಕುತ್ತಿಗೆಗೆ ವೇಲ್‌ ಬಿಗಿಯಲಾಗಿತ್ತು. ಅದರ ಕೈ–ಕಾಲುಗಳು ತಣ್ಣಗಾಗಿದ್ದವು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಗು ಮೃತಪಟ್ಟಿರುವುದಾಗಿವೈದ್ಯರು ಹೇಳಿದರು’ ಎಂದು ಪೊಲೀಸರು ವಿವರಿಸಿದರು.

‘ಸ್ವಂತ ಮನೆ ಬಿಟ್ಟುಕೊಟ್ಟರೂ ಮಗ ಬದಲಾಗಲಿಲ್ಲ’

‘ನನ್ನ ಪತಿ, ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಪಿಂಚಣಿ ಹಣದಲ್ಲೇ ನಮ್ಮ ಮನೆ ನಡೆಯುತ್ತಿದೆ. ಪ್ರೀತಿಸಿದ ಹುಡುಗಿಯನ್ನು ಮಗ ಕಾರ್ತಿಕ್ ಮದುವೆಯಾದ. ಆತ ಅಂತರಧರ್ಮೀಯ ವಿವಾಹವಾದರೂ ನಾವು ಆಕ್ಷೇಪಿಸಲಿಲ್ಲ. ಮಗ–ಸೊಸೆ ಚೆನ್ನಾಗಿರಲಿ ಎಂದೇ ಬಯಸಿದ್ದೆವು. ಹೀಗಾಗಿಯೇ ಅವರಿಬ್ಬರ ವಾಸಕ್ಕೆ ಸ್ವಂತ ಮನೆಯನ್ನೇ ಬಿಟ್ಟು ಕೊಟ್ಟಿದ್ದೆವು. ನಾನು, ಪತಿ ಹಾಗೂ ಇನ್ನೊಬ್ಬ ಮಗ, ಸಂಬಂಧಿಕರೊಬ್ಬರ ಮನೆಯಲ್ಲಿ ಬಾಡಿಗೆಗೆ ಇದ್ದೆವು’ ಎಂದು ವಿಜಯಲಕ್ಷ್ಮಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

‘ಸ್ವಂತ ಮನೆ ಇದ್ದರೂ ಸಂಬಂಧಿಕರ ಮನೆಯಲ್ಲಿ ವಾಸವಿದ್ದಿದ್ದರಿಂದ ಜನರು ಹೀಯಾಳಿಸುತ್ತಿದ್ದರು. ಅದರಿಂದ ನನಗೂ, ಪತಿಗೂ ತುಂಬಾ ನೋವಾಗಿತ್ತು. ಮನೆಗೆ ಬಂದು ಉಳಿದುಕೊಳ್ಳಿ ಎಂದು ಮಗ ಒಂದು ದಿನವೂ ಹೇಳಲಿಲ್ಲ’.

‘ಮಗ ಯಾವುದೇ ಕೆಲಸಕ್ಕೂ ಹೋಗುತ್ತಿರಲಿಲ್ಲ. ಆತನ ಮನೆ ನಿರ್ವಹಣೆ ಹಾಗೂ ಮಕ್ಕಳನ್ನು ಆಸ್ಪತ್ರೆಗೆ ತೋರಿಸಲು ನಾನೇ ಹಣ ಕೊಡುತ್ತಿದ್ದೆ. ಪತ್ನಿಗೂ ಆತ ಕಿರುಕುಳ ನೀಡುತ್ತಿದ್ದ. ಕೆಲಸಕ್ಕೆ ಹೋಗು ಎಂದರೂ ಕೇಳುತ್ತಿರಲಿಲ್ಲ. ಆತನಿಗೂ ನನಗೂ ನಿತ್ಯ ಜಗಳವಾಗುತ್ತಿತ್ತು’.

‘ಡಿ. 21ರಂದು ಬೆಳಿಗ್ಗೆಯೂ ಆತನೊಂದಿಗೆ ಜಗಳವಾಗಿತ್ತು. ನನ್ನ ಮೇಲೆಯೇ ಆತ ಹಲ್ಲೆ ಮಾಡಿದ್ದ. ಅದೇ ಕೋಪದಲ್ಲೇ ಮಗುವನ್ನು ಕೊಲೆ ಮಾಡಿದೆ. ಕೊಲೆ ನಂತರವಾದರೂ ಆತನಿಗೆ ಬುದ್ಧಿ ಬರುತ್ತದೆಂದು ಅಂದುಕೊಂಡಿದ್ದೆ’ ಎಂದು ಆರೋಪಿ ಹೇಳಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.