ADVERTISEMENT

ಸಂಘರ್ಷಕ್ಕೆ ಕಾರಣ ಹಲ್ಲೆ ಪ್ರಕರಣ: ಆರೋಪಿಗಳು ಪ್ರಭಾವಿ; ವಕೀಲರ ಸಂಘದ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:15 IST
Last Updated 2 ಆಗಸ್ಟ್ 2022, 21:15 IST
   

ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಮಾಜಿ ಖಜಾಂಚಿ ಎಚ್‌.ವಿ.ಪ್ರವೀಣ್ ಗೌಡ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಜಾಮೀನು ಅರ್ಜಿಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸುವುದಕ್ಕೆ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದ ಘಟನೆಗೆ ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಸಾಕ್ಷಿಯಾಯಿತು.

ಜಾಮೀನು ಕೋರಿ ಆರೋಪಿ ಗಳಾದರಂಗನಾಥ್‌ ಮತ್ತು ರಾಕೇಶ್‌ ಸಲ್ಲಿಸಿರುವ ಅರ್ಜಿಗಳನ್ನು ಸಿಟಿ ಸಿವಿಲ್‌ ಕೋರ್ಟ್‌ನ 59ನೇ ನ್ಯಾಯಾಲಯದ ನ್ಯಾಯಾಧೀಶ ಎನ್‌.ಕೃಷ್ಣಯ್ಯ ವಿಚಾರ ಣೆಗೆ ನಿಗದಿಪಡಿಸಿದ್ದರು. ಆದರೆ, ಅರ್ಜಿದಾರರ ಪರ ವಕೀಲ ಸಿ.ಎಚ್.ಹನುಮಂತರಾಯ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದನ್ನು ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಬಲವಾಗಿ ಆಕ್ಷೇಪಿಸಿದರು.

‘ಆರೋಪಿಗಳಿಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ.ಅವರಿಗೆ ವಿಶೇಷ ಅವಕಾಶ ಯಾಕೆ, ಈ ಅರ್ಜಿ ವಿಚಾ ರಣೆಮುಕ್ತ ಕಲಾಪದಲ್ಲೇ ನಡೆಯಲಿ’ ಎಂದು ಆಗ್ರಹಿಸಿದರು. ಇದರಿಂದಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಸಲ್ಲಿಸಬೇಕಾಗಿದ್ದ ತಕರಾರು ಸಲ್ಲಿಸದೇ ಹೋದರು. ಈ ಸಂದರ್ಭ ಉಂಟಾದ ಗುಜುಗುಜು ಮಧ್ಯದಲ್ಲೇ ನ್ಯಾಯಾಧೀಶರು ವಿಚಾರಣೆ ಯನ್ನು ಇದೇ 12ಕ್ಕೆ ಮುಂದೂಡಿದರು.

ADVERTISEMENT

ಪ್ರಕರಣವೇನು?: ಎಚ್‌.ವಿ. ಪ್ರವೀಣ್‌ ಗೌಡ ಜುಲೈ 5ರಂದು ರಾತ್ರಿ 11 ಗಂಟೆ ವೇಳೆ ಬೈಕಿನಲ್ಲಿ ಮ್ಯಾಜಿಸ್ಟ್ರೇಟ್‌ ಕೋರ್ಟ್ ಮುಂದಿನ ಸರ್ಕಲ್‌ನಲ್ಲಿ ಸಿಗ್ನಲ್‌ ದಾಟಬೇಕಿತ್ತು. ಆಗ ಅವರ ಬಲ ಬದಿಯಲ್ಲಿ ಸಿಗ್ನಲ್‌ ತೆರವಿಗಾಗಿ ಕಾಯುತ್ತಾ ನಿಂತಿದ್ದ ಬೆಂಜ್‌ ಕಾರಿನಲ್ಲಿದ್ದ ಅಪರಿಚಿತರ ಜೊತೆ ವಾಗ್ವಾದ ನಡೆದಿತ್ತು. ಬೈಕ್‌ ಕಾರಿಗೆ ತಗುಲಿದೆ ಎಂಬ ಕಾರಣಕ್ಕೆ ಪರಸ್ಪರ ಕೈಕೈ ಮಿಲಾಯಿಸಿಕೊಂಡ ಪರಿಣಾಮ ಪ್ರವೀಣ್‌ ಗೌಡ ಅವರ ಒಂದು ಹಲ್ಲು ಮುರಿದಿತ್ತು. ಈ ಸಂಬಂಧ ಅವರು ಹಲಸೂರು ಗೇಟ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೊದಲಿಗೆ, ‘ಪೊಲೀಸರು ದೂರು ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ’ ಎಂದು ಆಕ್ಷೇಪಿಸಿದ್ದ ಬೆಂಗಳೂರು ವಕೀಲರ ಸಂಘ, ಕಬ್ಬನ್‌ ಪಾರ್ಕ್‌ ಸೆಂಟ್ರಲ್‌ ಡಿಸಿಪಿಗೆ ವಿಷಯ ಮನದಟ್ಟು ಮಾಡಿ; ‘ದೂರು ದಾಖಲಿಸಿಕೊಳ್ಳದೇ ಹೋದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸುತ್ತೇವೆ’ ಎಂದು ಎಚ್ಚರಿಸಿತ್ತು. ಇದರಿಂದ ಪೊಲೀಸರು ಅಪರಿಚಿತ ಆರೋಪಿಗಳ ವಿರುದ್ಧಐಪಿಸಿ ಕಲಂ 341 (ವ್ಯಕ್ತಿಯ ಚಲನೆಗೆ ಅಡ್ಡಿಪಡಿಸುವುದು), 326 (ಗಂಭೀರ ಗಾಯಗೊಳಿಸುವುದು) ಅಂತೆಯೇ 34ರ (ಸಮಾನ ಮನಸ್ಕರಾಗಿ ಮಾಡು) ಅನುಸಾರ ದೂರು ದಾಖಲಿಸಿದ್ದರು.

ಜುಲೈ 13ರಂದು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅಂದು ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಮುಂದಾದಾಗ ಕೋರ್ಟ್‌ ಹಾಲ್‌ನಲ್ಲಿ ಸಾಕ‌ಷ್ಟು ವಕೀಲರು ಜಮಾಯಿಸಿದ್ದರು. ಇದರಿಂದಾಗಿ ಮ್ಯಾಜಿಸ್ಟ್ರೇಟ್ ಮನೆಯಲ್ಲಿ ಹಾಜರುಪಡಿಸಲಾಯಿತು. ಆರೋಪಿಗಳನ್ನುಮ್ಯಾಜಿಸ್ಟ್ರೇಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಂತರ ಆರೋಪಿಗಳ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಹಾಜರಾಗಿ, ಕಳೆದ ತಿಂಗಳು 25ರಂದು ಜಾಮೀನು ಅರ್ಜಿ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಸ್ವತಃ ವಿವೇಕ್ ರೆಡ್ಡಿ ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದು, ‘ಈ ಪ್ರಕರಣದಲ್ಲಿ ವಕೀಲರು ಹಲ್ಲೆಗೊಳಗಾಗಿದ್ದಾರೆ. ದೂರು ಕೊಟ್ಟು ಎಂಟು ದಿನವಾದರೂ ಪೊಲೀಸರು ಪ್ರಕರಣ ಎಂದು ದಾಖಲಿಸಿರಲಿಲ್ಲ. ಪೊಲೀಸರು ತನಿಖೆ ಮಾಡಿ ಆರೋ‍ಪಿಗಳನ್ನು ಬಂಧಿಸಲೇ ಇಲ್ಲ. ಪ್ರವೀಣ್‌ ಗೌಡ ಅವರೇ ಆರೋಪಿಗಳನ್ನು ಪತ್ತೆ ಹಚ್ಚಿಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ಪ್ರಭಾವಿಗಳು ಎಂಬ ಕಾರಣಕ್ಕೆ ಪೊಲೀಸರು ಪೂರ್ವಗ್ರಹ ಪೀಡಿತರಾಗಿದ್ದಾರೆ‘ ಎಂದು ದೂರಿದ್ದರು.

ಇದಕ್ಕೆ ಹನುಮಂತರಾಯ ಅವರು ವಿವೇಕ್‌ ರೆಡ್ಡಿ ಅವರಿಗೆ, ‘ಈ ಕೇಸಿನಲ್ಲಿ ನೀವು ಫಿರ್ಯಾದುದಾರರಲ್ಲ, ಹಲ್ಲೆಗೆ ಒಳಗಾದವರಲ್ಲ, ಪ್ರಾಸಿಕ್ಯೂಟರ್‍ರೂ ಅಲ್ಲ, ಫಿರ್ಯಾದುದಾರರ ಪರ ವಕೀಲರೂ ಅಲ್ಲ. ಪ್ರಕರಣವನ್ನು ಕುರಿತು ಏನೊಂದನ್ನೂ ಹೇಳುವಂತಹ ಅಥವಾ ಪ್ರಕರಣದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಹತೆ ಹೊಂದಿಲ್ಲ. ರಾಜಕೀಯ ಲಾಭದ ಕಾರಣಕ್ಕಾಗಿಬರುತ್ತಿದ್ದೀರಿ’ ಎಂದು ದೂರಿದ್ದರು.

ಈ ಸಂದರ್ಭ ಹನುಮಂತರಾಯ ಮತ್ತು ವಿವೇಕ್‌ ರೆಡ್ಡಿ ಮಧ್ಯ ಮಾತಿನ ಚಕಮಕಿ ನಡೆದಿತ್ತು.ನಂತರ ರಿಜಿಸ್ಟ್ರಾರ್ ಅವರು ಈ ಪ್ರಕರಣ ವಿಡಿಯೊ ಕಾನ್ಫರೆನ್ಸ್ ಮೂಲಕವೇ ನಡೆಯಲಿ ಎಂದು ಹನುಮಂತರಾಯ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.