ADVERTISEMENT

15 ವರ್ಷದ ನಂತರ ₹12 ಕೋಟಿ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 19:30 IST
Last Updated 8 ಡಿಸೆಂಬರ್ 2022, 19:30 IST
ಬಿಟಿಎಂ ಲೇಔಟ್ 4ನೇ ಹಂತದದಲ್ಲಿ ‘ಗ್ರೀನ್ ಆರ್ಕಿಡ್’ ಅಪಾರ್ಟ್‌ಮೆಂಟ್ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಗುರುವಾರ ಬಿಡಿಎ ಸಿಬ್ಬಂದಿ ತೆರವುಗೊಳಿಸಿದರು
ಬಿಟಿಎಂ ಲೇಔಟ್ 4ನೇ ಹಂತದದಲ್ಲಿ ‘ಗ್ರೀನ್ ಆರ್ಕಿಡ್’ ಅಪಾರ್ಟ್‌ಮೆಂಟ್ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಗುರುವಾರ ಬಿಡಿಎ ಸಿಬ್ಬಂದಿ ತೆರವುಗೊಳಿಸಿದರು   

ಬೆಂಗಳೂರು: ಖಾಸಗಿ ಅಪಾರ್ಟ್‌ಮೆಂಟ್‌ನವರು ಒತ್ತುವರಿ ಮಾಡಿಕೊಂಡು ಉದ್ಯಾನ ನಿರ್ಮಿಸಿದ್ದ ಜಾಗವನ್ನು ಬಿಡಿಎ ಅಧಿಕಾರಿಗಳು ಮರುವಶಕ್ಕೆ ಪಡೆದಿದ್ದಾರೆ.

ದೇವರಚಿಕ್ಕನಹಳ್ಳಿಯ ಬಿಟಿಎಂ ಲೇಔಟ್ 4ನೇ ಹಂತದ 2ನೇ ಬ್ಲಾಕ್ ಸರ್ವೆ ನಂ. 24/5ರಲ್ಲಿ ಎಂಟೂವರೆ ಗುಂಟೆ ಜಾಗದಲ್ಲಿ ‘ಗ್ರೀನ್ ಆರ್ಕಿಡ್’ ಎಂಬ ಖಾಸಗಿ ಅಪಾರ್ಟ್‌ಮೆಂಟ್ ಉದ್ಯಾನ ನಿರ್ಮಿಸಿತ್ತು. 15 ವರ್ಷಗಳಿಂದ ಹಲವು ಬಾರಿ ಈ ಜಾಗವನ್ನು ತೆರವುಗೊಳಿಸುವಂತೆ ಬಿಡಿಎ ಎಚ್ಚರಿಕೆ ನೀಡಿದ್ದರೂ ತೆರವುಗೊಳಿಸಿರಲಿಲ್ಲ. ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೂಡಲೇ ತೆರವಿಗೆ ಸೂಚನೆ ನೀಡಿದ್ದರು.

ಅಧ್ಯಕ್ಷರ ಸೂಚನೆ ಮತ್ತು ಆಯುಕ್ತ ಕುಮಾರ್ ನಾಯಕ್ ಅವರ ಆದೇಶದ ಮೇರೆಗೆ ಗುರುವಾರ ಬಿಡಿಎ ಎಸ್‌ಟಿಎಫ್ ಮುಖ್ಯಸ್ಥ ನಂಜುಂಡೇಗೌಡ, ಡಿವೈಎಸ್ಪಿ ರವಿಕುಮಾರ್, ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ, ಎಂಜಿನಿಯರ್‌ ಅಶೋಕ್ ಮತ್ತು ಪರುಶರಾಮ್ ಅವರು ಉದ್ಯಾನ ತೆರವುಗೊಳಿಸಿದರು.

ADVERTISEMENT

‘ನಗರದಲ್ಲಿನ ಪ್ರಮುಖ ಬಡಾವಣೆಗಳಲ್ಲಿ ಬಿಡಿಎ ಜಾಗವನ್ನು ಅನೇಕ ಜನರು ಅತಿಕ್ರಮಣ ಮಾಡಿರುವುದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಇಂತಹ ಜಾಗಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತದೆ’ ಎಂದು ಎಸ್.ಆರ್.ವಿಶ್ವನಾಥ್ ತಿಳಿಸಿದರು.

ಭೂಕಬಳಿಕೆದಾರರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಹಲವು ಮಾಹಿತಿ ಬಂದಿದೆ. ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.