ADVERTISEMENT

ವಿದೇಶಿ ಪ್ರಜೆ ಮೇಲೆ ಹಲ್ಲೆ; ಆಟೊ ಚಾಲಕ ಬಂಧನ

9 ಕಿ.ಮೀ.ಗೆ ₹ 700 ಕೇಳಿದ್ದ ಚಾಲಕ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 15:48 IST
Last Updated 10 ಅಕ್ಟೋಬರ್ 2021, 15:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ತಾನು ಕೇಳಿದಷ್ಟು ಬಾಡಿಗೆ ಕೊಡಲಿಲ್ಲವೆಂಬ ಕಾರಣಕ್ಕೆ ಆಟೊ ಚಾಲಕನೊಬ್ಬ, ಆಸ್ಟೇಲಿಯಾ ಪ್ರಜೆಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಬೈಯಪ್ಪನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

‘ಅ. 6ರಂದು ನಡೆದಿರುವ ಘಟನೆ ಸಂಬಂಧ ಆಸ್ಟ್ರೇಲಿಯಾ ಪ್ರಜೆ ಗ್ರೇ ಜಾನ್ ನ್ಯೂಮನ್ ಎಂಬುವರು ದೂರು ನೀಡಿದ್ದಾರೆ. ಆರೋಪಿಯಾದ ಆಟೊ ಚಾಲಕ ಶರತ್‌ನನ್ನು ಬಂಧಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿರುವ ಗ್ರೇನ್‌ ಜಾನ್ ನ್ಯೂಮನ್, ಅ. 6ರಂದು ಚರ್ಚ್‌ಸ್ಟ್ರೀಟ್‌ನಲ್ಲಿ ಸುತ್ತಾಡಿದ್ದರು. ನಂತರ ಸಿ.ವಿ.ರಾಮನ್‌ ನಗರದಲ್ಲಿರುವ ಸ್ನೇಹಿತರೊಬ್ಬರ ಮನೆಗೆ ಹೋಗಲು ಚರ್ಚ್‌ಸ್ಟ್ರೀಟ್‌ನಲ್ಲಿ ಆಟೊ ಹತ್ತಿದ್ದರು.’

ADVERTISEMENT

‘₹ 200 ಬಾಡಿಗೆಗೆ ಮಾತುಕತೆ ನಡೆಸಿದ್ದ ಚಾಲಕ ಶರತ್‌, ಆಟೊದಲ್ಲಿ ಗ್ರೇ ಜಾನ್ ಅವರನ್ನು ಹತ್ತಿಸಿಕೊಂಡು ಹೊರಟಿದ್ದ. ಹಲಸೂರು ಬಳಿ ಆಟೊ ಚಕ್ರ ಪಂಕ್ಚರ್ ಆಗಿತ್ತು. ರಸ್ತೆ ಬದಿಯಲ್ಲಿದ್ದ ಗ್ಯಾರೇಜ್‌ನಲ್ಲಿ ಪಂಕ್ಚರ್ ತಿದ್ದಿಸಿದ್ದ ಆರೋಪಿ, ಅದಾದ ನಂತರ ಗ್ರೇನ್‌ ಜಾನ್ ಅವರನ್ನು ಕರೆದುಕೊಂಡು ನಿಗದಿತ ಸ್ಥಳದಲ್ಲಿ ಬಿಟ್ಟಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಮೊದಲೇ ಮಾತನಾಡಿದಂತೆ ಗ್ರೇ ಜಾನ್, ಚಾಲಕ ಶರತ್‌ಗೆ ₹ 200 ಬಾಡಿಗೆ ಹಾಗೂ ₹ 100 ಟಿಪ್ಸ್‌ ಕೊಟ್ಟಿದ್ದ. ಅದನ್ನು ಸ್ವೀಕರಿಸಲು ಒಪ್ಪದ ಚಾಲಕ, ₹ 700 ನೀಡುವಂತೆ ಒತ್ತಾಯಿಸಿದ್ದ. ಕೇಳಿದಷ್ಟು ಹಣ ನೀಡಲು ಸಾಧ್ಯವಿಲ್ಲವೆಂದು ವಿದೇಶಿ ಪ್ರಜೆ ಹೇಳಿದ್ದರು. ಅಷ್ಟಕ್ಕೆ ಜಗಳ ತೆಗೆದ ಚಾಲಕ, ಗ್ರೇ ಜಾನ್ ಮೇಲೆ ಹಲ್ಲೆ ಮಾಡಿದ್ದ. ಮೊಬೈಲ್ ಕಸಿದುಕೊಳ್ಳಲು ಯತ್ನಿಸಿ ಪರಾರಿಯಾಗಿದ್ದ.’

‘ವಿದೇಶಿ ಪ್ರಜೆ, ಘಟನೆ ಬಗ್ಗೆ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದಿದ್ದ ಸ್ನೇಹಿತರು, ವಿದೇಶಿ ಪ್ರಜೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಗ್ರೇ ಜಾನ್‌ ಠಾಣೆಗೆ ಬಂದು ದೂರು ನೀಡಿದ್ದರು. ಅದರನ್ವಯ ಚಾಲಕ ಶರತ್ ವಿರುದ್ಧ ಎಫ್‌ಐಆರ್ ಸಹ ದಾಖಲಿಸಿಕೊಳ್ಳಲಾಗಿತ್ತು’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.