ADVERTISEMENT

ಎಟಿಎಂ ಕಾರ್ಡ್ ಬದಲಿಸಿ ವಂಚಿಸಿದ್ದವನ ಬಂಧನ

ವೃದ್ಧರೊಬ್ಬರ ₹ 8.51 ಲಕ್ಷ ದೋಚಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 19:31 IST
Last Updated 2 ಜುಲೈ 2022, 19:31 IST
   

ಬೆಂಗಳೂರು: ಎಟಿಎಂ ಘಟಕಕ್ಕೆ ಹೋಗುವ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಬದಲಿಸಿ ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದ ಆರೋಪಿ ಮಲ್ಲಿನಾಥ್ ಅಂಗಡಿ (32) ಎಂಬುವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಯಲಹಂಕ ಅಟ್ಟೂರು ಲೇಔಟ್ ನಿವಾಸಿ ಮಲ್ಲಿನಾಥ್, ವೃದ್ಧರೊಬ್ಬರ ಖಾತೆಯಿಂದ ₹ 8.51 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದ. ಈತನನ್ನು ಬಂಧಿಸಿ, 75 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ವೃದ್ಧ, ಬ್ಯಾಂಕೊಂದರಲ್ಲಿ ಹೊಸದಾಗಿ ಖಾತೆ ತೆರೆದು ಡೆಬಿಟ್ ಕಾರ್ಡ್ ಪಡೆದಿದ್ದರು. ಹೊಸ ಕಾರ್ಡ್‌ ಆಗಿದ್ದರಿಂದ ಪಿನ್ ನಿಗದಿಪಡಿಸಲು ಯಲಹಂಕ ನ್ಯೂ ಟೌನ್‌ನಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂ ಘಟಕಕ್ಕೆ ಹೋಗಿದ್ದರು. ಪಿನ್ ನಮೂದಿಸಲು ಸಾಧ್ಯವಾಗದೇ, ಪದೇ ಪದೇ ಪ್ರಯತ್ನಿಸುತ್ತಿದ್ದರು. ಘಟಕದ ಹೊರಗಿದ್ದ ಆರೋಪಿ ಮಲ್ಲಿನಾಥ್, ಸಹಾಯದ ನೆಪದಲ್ಲಿ ಒಳಗೆ ಹೋಗಿ ವೃದ್ಧರಿಂದ ಕಾರ್ಡ್ ಪಡೆದು ಪಿನ್ ನಿಗದಿಪಡಿಸಿಕೊಟ್ಟಿದ್ದ. ನಂತರ, ವೃದ್ಧರು ಮನೆಗೆ ಹೋಗಿದ್ದರು.’

ADVERTISEMENT

‘ವಾರದ ಬಳಿಕ ಹಣದ ಅವಶ್ಯಕತೆ ಇದ್ದಿದ್ದರಿಂದ ಡ್ರಾ ಮಾಡಲೆಂದು ವೃದ್ಧ ಎಟಿಎಂ ಘಟಕಕ್ಕೆ ಹೋಗಿದ್ದರು. ಖಾತೆಯಲ್ಲಿ ಹಣವಿಲ್ಲವೆಂಬುದು ಆಗ ಗೊತ್ತಾಗಿತ್ತು. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ₹ 8.51 ಲಕ್ಷ ಡ್ರಾ ಆಗಿರುವುದು ತಿಳಿದಿತ್ತು. ಬಳಿಕ, ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

ನಕಲಿ ಕಾರ್ಡ್ ಕೊಟ್ಟಿದ್ದ: ‘ಪಿನ್ ನಿಗದಿಪಡಿಸಿದ ಸಮಯದಲ್ಲಿ ಆರೋಪಿ, ವೃದ್ಧರಿಗೆ ನಕಲಿ ಕಾರ್ಡ್ ಕೊಟ್ಟು ಕಳುಹಿಸಿದ್ದ. ಅಸಲಿ ಕಾರ್ಡನ್ನು ತನ್ನ ಬಳಿಯೇ ಇಟ್ಟುಕೊಂಡು ಹಂತ ಹಂತವಾಗಿ ಹಣ ಡ್ರಾ ಮಾಡಿಕೊಂಡಿದ್ದ. ಅದರಲ್ಲೇ ಚಿನ್ನಾಭರಣ ಖರೀಸಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.