
ಬೆಂಗಳೂರು: ಎಟಿಎಂಗೆ ಹಣ ತುಂಬದೇ ₹1.38 ಕೋಟಿ ವಂಚನೆ ಮಾಡಿದ್ದ ಐವರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ.
ಹರೀಶ್‌ಕುಮಾರ್, ಪ್ರವೀಣ್‌ಕುಮಾರ್, ವರುಣ್, ಧನಶೇಖ್ ಹಾಗೂ ರಾಮಕ್ಕ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹಿಟಾಚಿ ಪೇಮೆಂಟ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್‌ನ ಆರ್.ನಾಗಾರ್ಜುನ್ ಅವರ ದೂರು ಆಧರಿಸಿ, ಭಾರತೀಯ ನ್ಯಾಯ ಸಂಹಿತೆ 316(4), 318(4) ಹಾಗೂ ಆರ್/ಡ್ಲ್ಯು3(5) ಅಡಿ ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸಲಾಗುತ್ತಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಿಟಾಚಿ ಪೇಮೆಂಟ್ ಸರ್ವೀಸ್ ಮೂಲಕ, ಎಸ್‌ಬಿಐ, ಆ್ಯಕ್ಸಿಸ್ ಸೇರಿದಂತೆ ಇತರೆ ಬ್ಯಾಂಕ್‌ನ ಎಟಿಎಂಗಳಿಗೆ ಹಣ ತುಂಬಲಾಗುತ್ತಿತ್ತು. ಈ ಕೆಲಸಕ್ಕೆ ಐವರನ್ನು ನೇಮಿಸಿಕೊಳ್ಳಲಾಗಿತ್ತು. ಅವರೆಲ್ಲರೂ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೋರಮಂಗಲದ ಆ್ಯಕ್ಸಿಸ್ ಬ್ಯಾಂಕ್‌ನಿಂದ ಆರೋಪಿಗಳು ಹಣ ಪಡೆದು ಎಟಿಎಂಗಳಿಗೆ ತುಂಬುತ್ತಿದ್ದರು. ಆ ಹಣದಲ್ಲಿ ಸ್ವಲ್ಪ ಉಳಿಸಿಕೊಂಡು ಉಳಿದ ಹಣವನ್ನು ತುಂಬುತ್ತಿದ್ದರು. ಹೀಗೆ 2024ರ ಜನವರಿಯಿಂದ 2025ರ ಡಿಸೆಂಬರ್ ವರೆಗೆ ₹80.49 ಲಕ್ಷ ಹಾಗೂ ₹57.96 ಲಕ್ಷ ಮೋಸ ಮಾಡಿದ್ದಾರೆ. ಲೆಕ್ಕ ಪರಿಶೋಧನೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.