
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹ 7.11 ಕೋಟಿ ದರೋಡೆ ಮಾಡಿದ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಒಟ್ಟು ಏಳು ಆರೋಪಿಗಳ ಬಂಧನವಾಗಿದೆ.
ಬಂಧಿತ ರಾಕೇಶ್, ದರೋಡೆ ಕೃತ್ಯದ ಪ್ರಮುಖ ಆರೋಪಿ ರವಿಯ ಸಹೋದರ. ತಲೆಮರೆಸಿಕೊಂಡಿರುವ ಆರೋಪಿ ದಿನೇಶ್‌ಗಾಗಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಉಳಿದ ₹ 80 ಲಕ್ಷ ನಗದು ಪತ್ತೆ ಕಾರ್ಯ ಮುಂದುವರಿದಿದೆ.
ದರೋಡೆ ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ನಗರ ಪೊಲೀಸರು, 54 ತಾಸುಗಳಲ್ಲಿ ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಸಿಎಂಎಸ್ ಮಾಜಿ ಉದ್ಯೋಗಿ ಕ್ಸೇವಿಯರ್, ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಅವರನ್ನು ಬಂಧಿಸಿ, ₹5.76 ಕೋಟಿ ನಗದು ಜಪ್ತಿ ಮಾಡಿದ್ದರು. ಇದಾದ 6–7 ಗಂಟೆಯಲ್ಲಿ ಹೈದರಾಬಾದ್‌ನಲ್ಲಿ ನವೀನ್, ರವಿ, ನೆಲ್ಸನ್ ಮೂವರನ್ನು ಬಂಧಿಸಿ, ₹ 53 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.
ಸಹೋದರನ ಜತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ರಾಕೇಶ್‌ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕೃತ್ಯದಲ್ಲಿ ತನ್ನ ಪಾತ್ರದ ಕುರಿತು ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಆರು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಪಾಳು ಬಿದ್ದ ಮನೆಯಲ್ಲಿ ಆರೋಪಿಗಳು ಬಚ್ಚಿಟ್ಟಿದ್ದ ₹ 5.76 ಕೋಟಿ ನಗದನ್ನು ಪೊಲೀಸರು ಶನಿವಾರ ಜಪ್ತಿ ಮಾಡಿದ್ದರು. ಹಣ ತುಂಬಿದ್ದ ಪೆಟ್ಟಿಗೆಗಳ ಸಮೇತ ಚಿತ್ತೂರಿಗೆ ಹೋಗುವ ಮೊದಲೇ ಹೊಸಕೋಟೆ ಟೋಲ್‌ಗೆ ಹೋಗದೇ, ಅಡ್ಡದಾರಿ ಮೂಲಕ ಕೆರೆ ಏರಿ ಮೇಲೆ ಸಾಗಿ ಪಾಳು ಬಿದ್ದ ಮನೆಯಲ್ಲಿ ಹಣವನ್ನು ರಹಸ್ಯವಾಗಿ ಇರಿಸಿದ್ದರು. ಬಳಿಕ ಖಾಲಿ ಪೆಟ್ಟಿಗೆಗಳನ್ನು ಚಿತ್ತೂರು ಕಡೆ ಕೊಂಡೊಯ್ದು ಬಿಸಾಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಗಳ ಪೈಕಿ ಕೆಲವರು ಜೂಜಾಟ ಹಾಗೂ ದುಶ್ಚಟದಿಂದ ಹಣ ಕಳೆದುಕೊಂಡು, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ವಿಲಾಸಿ ಜೀವನ ನಡೆಸಲು ಮತ್ತು ಸಾಲ ತೀರಿಸಲು ಕ್ಸೇವಿಯರ್ ಸಂಚಿಗೆ ಎಲ್ಲರೂ ಕೈ ಜೋಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ದರೋಡೆ ಪ್ರಕರಣದಲ್ಲಿ ಬಂಧಿತರಾಗಿರುವ ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಅವರನ್ನು ಅಮಾನತುಗೊಳಿಸಿ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಆದೇಶ ಹೊರಡಿಸಿದ್ದಾರೆ. 2018ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಅಣ್ಣಪ್ಪ ಬಾಣಸವಾಡಿ ಠಾಣೆಯಲ್ಲಿ ಅಪರಾಧ ವಿಭಾಗ ಮತ್ತು ಸಿಸಿಬಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಹಲವು ಬಾರಿ ಅವರ ವಿರುದ್ಧ ಕರ್ತವ್ಯ ಲೋಪದ ಆರೋಪಗಳು ಬಂದಿದ್ದವು. ಹೀಗಾಗಿ ಬಂದೋಬಸ್ತ್ ಹೊರತುಪಡಿಸಿ ಬೇರೆ ಕೆಲಸಗಳಿಗೆ ನಿಯೋಜಿಸಿರಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಗರ ಎಲ್ಲಾ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಹಾಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳ ಮಾನಿಟರಿಂಗ್ ಸಭೆ ನಡೆಸಿ ವರದಿ ನೀಡುವಂತೆ ಆಯಾ ವಿಭಾಗದ ಎಸಿಪಿ ಮತ್ತು ಡಿಸಿಪಿಗಳಿಗೆ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.
ಬೆಂಗಳೂರು: ‘ಪೊಲೀಸ್ ಸಿಬ್ಬಂದಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದರೆ ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಎಚ್ಚರಿಕೆ ನೀಡಿದರು.
ನಗರದಲ್ಲಿ ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ರೀತಿಯ ಕೃತ್ಯದಲ್ಲಿ ಪೊಲೀಸರು ಭಾಗಿಯಾದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
‘ಬೆಂಗಳೂರಿಗೆ ಕೆಟ್ಟ ಹೆಸರು ಬರುವ ರೀತಿ ಈ ಕೃತ್ಯ ನಡೆದಿತ್ತು. ದರೋಡೆಯಲ್ಲಿ ಇಲಾಖೆಯ ಒಬ್ಬ ವ್ಯಕ್ತಿ ಭಾಗಿಯಾಗಿದ್ದ. ಏಳು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನೂ ಕೆಲವು ಆರೋಪಿಗಳು ಸಿಗಬೇಕಿದೆ. ದರೋಡೆ ಪ್ರಕರಣ ಇಲಾಖೆಗೆ ಸವಾಲಾಗಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ತಾಂತ್ರಿಕವಾಗಿ ಬಹಳ ಎಚ್ಚರಿಕೆಯಿಂದ ಬುದ್ಧಿ ಉಪಯೋಗಿಸಿ ಪ್ರಕರಣ ಭೇದಿಸಿದ್ದಾರೆ’ ಎಂದರು.
‘ಎಟಿಎಂಗಳಿಗೆ ಹಣ ತುಂಬುವ ಏಜೆನ್ಸಿಯವರು ಆರ್‌ಬಿಐ ಮಾರ್ಗಸೂಚಿ ಪಾಲಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಏಜೆನ್ಸಿಯವರು ನಿರ್ಲಕ್ಷ್ಯ ತೋರಿದ್ದರೆ ಅವರ ಮೇಲೂ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದರು.
ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ ವಂಶಿಕೃಷ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.