ADVERTISEMENT

ಎಟಿಎಂ ಎಲ್ಲಿ ಸೆಕ್ಯುರಿಟಿ?

ಪ್ರದೀಪ ಟಿ.ಕೆ
Published 21 ಜೂನ್ 2019, 19:30 IST
Last Updated 21 ಜೂನ್ 2019, 19:30 IST
   

ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬ ಮಹಿಳೆ 2013, ನವೆಂಬರ್ 19ರಂದು ಹಣ ಪಡೆಯುತ್ತಿದ್ದರು. ಈ ವೇಳೆ ಅವರ ಮೇಲೆ ಆಂಧ್ರ ಪ್ರದೇಶ ಮೂಲದ ಮಧುಕರ್ ರೆಡ್ಡಿ ಮಾರಣಾಂತಿಕ ಹಲ್ಲೆ ಮಾಡಿ, ಹಣ ಕಿತ್ತುಕೊಂಡು ಪರಾರಿಯಾಗಿದ್ದ. ಘಟನೆಯಿಂದ ಎಚ್ಚೆತ್ತಸರ್ಕಾರ ಹಾಗೂ ಪೊಲೀಸ್ ಇಲಾಖೆ ಸ್ಪಷ್ಟ ಆದೇಶ ನೀಡಿ, ಎಟಿಎಂ ಕೇಂದ್ರಗಳಲ್ಲಿ 24 ತಾಸುಗಳ ಕಾಲ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯ ನಿಯೋಜಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಹಾಗೆಯೇ ಎಲ್ಲ ಬ್ಯಾಂಕ್‌ಗಳು ಎಟಿಎಂಗಳ ಬಳಿ ಸೆಕ್ಯುರಿಟಿ ನೇಮಿಸಿ ಭದ್ರತೆ ಒದಗಿಸಿದ್ದವು ಅಷ್ಟೆ. ಆದರೆ ಇದು ಕೆಲ ತಿಂಗಳಿಗಷ್ಟೆ ಸೀಮಿತವಾಗಿತ್ತು. ಇಂದು ಬಹುಪಾಲು ಎಟಿಎಂ ಕೇಂದ್ರಗಳಿಗೆ ಕಾವಲುಗಾರರೇ ಇಲ್ಲ. ಹಗಲು ಹೊತ್ತಿನಲ್ಲೂ ಹಣ ತೆಗೆದುಕೊಳ್ಳಲು ಭಯವಾಗುವ ಪರಿಸ್ಥಿತಿ ಎದುರಾಗಿದೆ.

ಕೆಲ ಎಟಿಎಂ ಕೇಂದ್ರಗಳು ಮುಖ್ಯರಸ್ತೆಯಿಂದ ದೂರವಿರುವ ನಿರ್ಜನ ಪ್ರದೇಶದಲ್ಲಿರುತ್ತವೆ. ರಾತ್ರಿ ವೇಳೆ ತುರ್ತು ಸಂದರ್ಭದಲ್ಲಿ ಹಣ ತೆಗೆದುಕೊಳ್ಳಬೇಕಾದರೆ ಆತಂಕ ಎದುರಾಗುತ್ತದೆ. ಕೆಲ ಅನಕ್ಷರಸ್ಥರು ಹಣ ತೆಗೆದುಕೊಡುವಂತೆ ಮತ್ತೊಬ್ಬರ ಮೊರೆ ಹೋಗುತ್ತಾರೆ. ಇದನ್ನೆ ದುರ್ಬಳಕೆ ಮಾಡಿಕೊಳ್ಳುವ ಕೆಲಮಂದಿ ವಂಚನೆಯಿಂದ ಸಾವಿರಾರು ರೂಗಳನ್ನು ಅಪಹರಿಸಿರುವ ಸಂಗತಿಗಳು ಇಲ್ಲದಿಲ್ಲ. ಕಾವಲುಗಾರರು ವ್ಯವಹಾರ ಗೊತ್ತಿಲ್ಲದವರಿಗೆ ನೆರವಾಗಬೇಕು. ಆದರೆ ಕಾವಲುಗಾರರೇ ಇಲ್ಲದೆ ಅದೆಷ್ಟೋ ಎಟಿಎಂ ಕೇಂದ್ರಗಳು ಬಣಗುಡುತ್ತಿವೆ.

ಸ್ವಚ್ಛತೆ ಏಕಿಲ್ಲ?

ADVERTISEMENT

ಬಹುತೇಕ ಎಟಿಎಂಗಳು ಕೊಳಕಿನ ತಾಣಗಳಾಗಿವೆ. ಕಸವನ್ನೇ ಗುಡಿಸಿರುವುದಿಲ್ಲ. ಯಂತ್ರದ ಪರದೆ ಕಲೆಗಳಿಂದ ತುಂಬಿರುತ್ತವೆ. ರಸೀದಿ ಚೀಟಿಗಳು, ಹಣ ತುಂಬುವಾಗ ಬಿಸಾಡಿದ ವ್ಯರ್ಥ ಪೇಪರ್‌ ಮುಂತಾದವುಗಳಿಂದ ಒಳಗೆ ಕಾಲಿಡಲು ಆಗದಂತಹ ವಾತಾವರಣ ವಿರುತ್ತದೆ. ಕಸದ ಡಬ್ಬಿಗಳನ್ನು ವಾರವಾದರೂ ಸ್ವಚ್ಛಗೊಳಿಸಿರುವುದಿಲ್ಲ. ಬಾಗಿಲುಗಳು ಶಿಥಿಲಾವಸ್ಥೆ ತಲುಪಿದ್ದು ಪೂರ್ತಿ ಮುಚ್ಚಲಾಗುವುದಿಲ್ಲ. ಇದರಿಂದ ಕೆಲವೊಬ್ಬರು ಹಣ ತೆಗೆದುಕೊಳ್ಳುವಾಗ ಹಿಂದೆಯೇ ಬಂದು ನಿಂತಿರುತ್ತಾರೆ. ಎಟಿಎಂ ಬಳಕೆಯ ನಂತರ ₹ 23 ಕಡಿತಗೊಳಿಸುವ ಬ್ಯಾಂಕುಗಳು ಸ್ವಚ್ಛತೆಗೇಕೆ ಆದ್ಯತೆ ನೀಡುವುದಿಲ್ಲ ಎಂಬುದು ಬಳಕೆದಾರರ ಆರೋಪ.

ಚಿಲ್ಲರೆ ಸಮಸ್ಯೆ

ಪ್ರಯಾಣ, ಶಾಪಿಂಗ್ ಮುಂತಾದ ಸಮಯದಲ್ಲಿ ಚಿಲ್ಲರೆ ಅಗತ್ಯವಿರುತ್ತದೆ. ಆದರೆ ಎಷ್ಟೋ ಎಟಿಎಂಗಳಲ್ಲಿ ₹ 100ರ ನೋಟುಗಳೇ ಲಭ್ಯವಿರುವುದಿಲ್ಲ. ಅಗತ್ಯವಿರುವ ₹ 200, 300 ಕ್ಕೆಲ್ಲ ಐನೂರನ್ನೋ, ಸಾವಿರವನ್ನೋ ತೆಗೆಯಬೇಕಿರುತ್ತದೆ. ಕೆಲವೊಬ್ಬರ ಬ್ಯಾಂಕ್ ಖಾತೆಯಲ್ಲಿ ಸಾವಿರದಷ್ಟು ಮಾತ್ರ ಹಣವಿರುತ್ತದೆ. ಇಂತಹವರು ನೂರಿನ್ನೂರು ತೆಗೆಯಬೇಕಾದಾಗ ಅನಿವಾರ್ಯವಾಗಿ ಐನೂರನ್ನು ಡ್ರಾ ಮಾಡಬೇಕಿ ರುತ್ತದೆ. ಇದಕ್ಕೆ ಹೊರಗೆಲ್ಲೂ ಚಿಲ್ಲರೆ ಸಿಗದೆ ಒದ್ದಾಡಬೇಕಿರುತ್ತದೆ. ಇರುವ ಹಣದಲ್ಲೇ ಐನೂರು, ಸಾವಿರ ತೆಗೆದರೆ ನಿಗದಿತ ಹಣವಿಲ್ಲದ ಕಾರಣದಿಂದ ನಂತರ ಹಣ ಜಮೆ ಮಾಡಿದಾಗ ಅದರಲ್ಲಿ ಇಂತಿಷ್ಟೆಂದು ಕಡಿತಗೊಳಿಸಲಾಗುತ್ತದೆ. ಇದು ಗ್ರಾಹಕರಿಗೆ ತಲೆ ನೋವಾಗಿ ಪರಿಣಮಿಸಿದೆ.

ನೋ ಕ್ಯಾಶ್

ಹಣದ ಅವಶ್ಯಕತೆ ಇರುವ ತುರ್ತು ಸಮಯದಲ್ಲಿ ಎಟಿಎಂ ಹೊಕ್ಕುತ್ತೇವೆ. ಆದರೆ ನೋ ಕ್ಯಾಶ್ ಎಂಬ ರಟ್ಟಿನ ಬೋರ್ಡ್‌ ನೋಡಿ ತೀವ್ರ ನಿರಾಸೆಯಾಗುತ್ತದೆ. ಜೊತೆಗೆ ಎಟಿಎಂ ಔಟ್ ಆಫ್ ಆರ್ಡರ್‌, ಎಟಿಎಂ ಅಂಡರ್‌ ಮೇಂಟೆನೆನ್ಸ್, ಅರ್ಧ ಮುಚ್ಚಿದ ಶಟರ್, ತೆರೆದಿದ್ದರೂ ಕೆಲಸ ಮಾಡದ ಮಷೀನ್, ಚಾಲ್ತಿಯಲ್ಲಿದ್ದರೂ ಡೆಬಿಟ್ ಕಾರ್ಡ್ ತುರುಕಿದಾಗ ಟ್ರಾನ್ಸಾಕ್ಷನ್ ಕ್ಯಾನ್ಸಲ್ಡ್‌ ಎಂದು ತೋರುತ್ತದೆ. ಏನಾಗಿದೆ ಎಂಬ ನಿಖರ ಮಾಹಿತಿಯೂ ಲಭ್ಯವಿರುವುದಿಲ್ಲ.

ನಿಷ್ಕ್ರಿಯ ಸಿಸಿ ಕೆಮೆರಾಗಳು

ಜ್ಯೋತಿ ಉದಯ್ ಪ್ರಕರಣದ ನಂತರ ಭದ್ರತೆಯ ಜೊತೆಗೆ ಸಿಸಿ ಕೆಮೆರಾಗಳ ಕಡ್ಡಾಯ ಅಳವಡಿಕೆ ಹಾಗೂ ಸೂಕ್ತ ನಿರ್ವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ಸೂಚಿಸಿತ್ತು. ಆದರೆ ಕೆಲ ಸಿಸಿ ಕೆಮೆರಾಗಳು ಹೆಸರಿಗಷ್ಟೆ ಅಳವಡಿಸಲ್ಪಟ್ಟಿವೆಯೇ ಹೊರತು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.ಕಾಲಕಾಲಕ್ಕೆ ಸ್ವಚ್ಛತೆ ಯಿಲ್ಲದೆ ಅವುಗಳ ಮೇಲೆ ಕುಳಿತಿರುವ ದೂಳು, ಕೊಳೆಯಿಂದ ಚಲನವಲನಗಳ ಸ್ಪಷ್ಟ ಚಿತ್ರಣವೇ ಲಭ್ಯವಿರುವುದಿಲ್ಲ. ಹಲವು ಸಿಸಿ ಕೆಮೆರಾಗಳು ಕೆಟ್ಟು ತಿಂಗಳುಗಳೇ ಕಳೆದಿದ್ದರೂ ಅವುಗಳ ರಿಪೇರಿಗೆ ಬ್ಯಾಂಕುಗಳು ಮುಂದಾಗಿರುವುದಿಲ್ಲ. ಇದು ವಂಚನೆ ಪ್ರಕರಣಗಳನ್ನು ಮತ್ತಷ್ಟು ಹೆಚ್ಚುವಂತೆ ಮಾಡುತ್ತಿದೆ.

ಇಂಥ ಅವ್ಯವಸ್ಥೆ ಮತ್ತು ಅನಾರೋಗ್ಯಕರ ವಾತಾವರಣವನ್ನು ತಪ್ಪಿಸಲು ಬ್ಯಾಂಕುಗಳು ಮತ್ತು ಅವರಿಂದ ಎಟಿಎಂ ನಿರ್ವಹಣೆ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಕೇಂದ್ರ ಹಣಕಾಸು ಇಲಾಖೆ ಎಟಿಎಂಗಳ ಕಾರ್ಯನಿರ್ವಹಣೆ, ಅಲ್ಲಿನ ಸ್ವಚ್ಛತೆ ಇತ್ಯಾದಿಗಳನ್ನು ಪರಿಶೀಲಿಸಲು ಒಂದು ವ್ಯವಸ್ಥೆಯನ್ನು ರೂಪಿಸಬೇಕು. ಎಲ್ಲ ಎಟಿಎಂಗಳ ಬಳಿ ದಿನದ 24 ಗಂಟೆಯೂ ಕಾವಲುಗಾರರನ್ನು ನೇಮಿಸಬೇಕು. ಇತರ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಎಟಿಎಂ ಬಳಕೆದಾರರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.