ಬೆಂಗಳೂರು: ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದ ಟೆಕಿಯೊಬ್ಬ ಆಟೊ ಚಾಲಕನಿಗೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಗೋವಿಂದಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಮ್ಮನಹಳ್ಳಿ ನಿವಾಸಿ ಆಟೊ ಚಾಲಕ ರಾಮ್ ಕುಮಾರ್ ಹಲ್ಲೆಗೆಗೊಳಗಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡಿದ್ದ ಟೆಕಿ ವಿಷ್ಣು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹೆಣ್ಣೂರು ಜಂಕ್ಷನ್‌ನಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ವಿಷ್ಣು ಅವರು ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದರು. ಅಲ್ಲಿಗೆ ಬಂದ ಹೊಯ್ಸಳ ಪೊಲೀಸರು ಅವರನ್ನು ಹಿಡಿಯಲು ಯತ್ನಿಸಿದ್ದಾರೆ. ಅಲ್ಲಿಯೇ ಇದ್ದ ರಾಮ್ ಕುಮಾರ್, ಆರೋಪಿ ಹಿಡಿಯಲು ಪೊಲೀಸರಿಗೆ ನೆರವಾದರು. ಆಗ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ರಾಮ್‌ಕುಮಾರ್‌ಗೆ ಇರಿದ ಪರಿಣಾಮ, ಹೊಟ್ಟೆ ಭಾಗದಲ್ಲಿ ಸಣ್ಣಪ್ರಮಾಣದಲ್ಲಿ ಗಾಯವಾಗಿದೆ.
ಈ ಬಗ್ಗೆ ರಾಮ್‌ಕುಮಾರ್ ದೂರು ಆಧರಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.