ADVERTISEMENT

ಬೆಂಗಳೂರು | ಪುತ್ರಿಗೆ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ತಾಯಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 17:22 IST
Last Updated 19 ನವೆಂಬರ್ 2025, 17:22 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಪೂಜೆಯ ನೆಪದಲ್ಲಿ ದೇವಸ್ಥಾನಕ್ಕೆ ಪುತ್ರಿಯ‌ನ್ನು ಕರೆದೊಯ್ದು ಹತ್ಯೆಗೆ ಯತ್ನಿಸಿ, ಬಳಿಕ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಆನೇಕಲ್‌ ನಿವಾಸಿ ರಮ್ಯಾ(25) ಹಲ್ಲೆಗೆ ಒಳಗಾದವರು. ಕೃತ್ಯ ಎಸಗಿದ ರಮ್ಯಾ ಅವರ ತಾಯಿ ಸುಜಾತಾ (49) ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಜಾತಾ ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಪ್ರಕರಣ?: ಆರೋಪಿ ಸುಜಾತಾ ಅಗ್ರಹಾರ ಲೇಔಟ್‌ನಲ್ಲಿ ಪುತ್ರಿ ಜತೆಗೆ ನೆಲಸಿದ್ದರು. ಐದು ವರ್ಷಗಳ ಹಿಂದೆ ರಮ್ಯಾ ಅವರನ್ನು ಆನೇಕಲ್‌ ನಿವಾಸಿ ಸೋಮಶೇಖರ್‌ ಅವರ ಜತೆಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದು, ಅಕಾಲಿಕವಾಗಿ ಮೃತಪಟ್ಟಿದ್ದರು. ಮಕ್ಕಳು ಮೃತಪಟ್ಟಿದ್ದರಿಂದ ರಮ್ಯಾ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಮೂಲಗಳು ಹೇಳಿವೆ.

ಪುತ್ರಿ ಕರೆಸಿಕೊಂಡು ದೇಗುಲದಲ್ಲಿ ಪೂಜೆ: ಮಾನಸಿಕವಾಗಿ ನೊಂದಿದ್ದ ಪುತ್ರಿಯನ್ನು ತಾಯಿ ಅಗ್ರಹಾರ ಲೇಔಟ್‌ನಲ್ಲಿ ಇರುವ ಹರಿಹರೇಶ್ವರ ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಮಾಡಿಸುತ್ತಿದ್ದರು. ತಾಯಿ ಹಾಗೂ ಮಗಳು ಇಬ್ಬರೇ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಪೂಜೆ ಮಾಡಲು ದೇವಸ್ಥಾನಕ್ಕೆ ತೆರಳಿದ್ದರು. ಆಗ ಸುಜಾತಾ ತನ್ನ ಬಳಿ ತಂದಿದ್ದ ಮಾರಕಾಸ್ತ್ರದಿಂದ ರಮ್ಯಾ ಅವರ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದರು. ಪುತ್ರಿಯ ಕುತ್ತಿಗೆ ಭಾಗದಲ್ಲಿ ರಕ್ತ ಬರುತ್ತಿದ್ದಂತೆಯೇ ಹೆದರಿದ್ದ ಸುಜಾತಾ, ತಾನೂ ಕತ್ತು ಕೊಯ್ದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ದೇವಸ್ಥಾನ ಸಮೀಪದಲ್ಲೇ ಸುಜಾತಾ ಅವರೂ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು.

ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಸುಜಾತಾ ಅವರ ವಿಚಾರಣೆ ಬಳಿಕ ಕೃತ್ಯಕ್ಕೆ ಕಾರಣ ಏನೆಂಬುದು ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸುಜಾತಾ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ನೆಲಸಿದ್ದರು. ಪುತ್ರಿಯ ಮಕ್ಕಳು ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಸುಜಾತಾ ಸಹ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಪುತ್ರಿಯನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.