ADVERTISEMENT

ಆಟಿಸಂ: ಸಮುದಾಯದ ಬೆಂಬಲ ಹೆಚ್ಚಲಿ; ಉಮಾ ಮಹದೇವನ್‌ ಸಲಹೆ

ಕಾಂ ಡೀಲ್‌ ಟ್ರಸ್ಟ್‌ ರಜತ ಮಹೋತ್ಸವದಲ್ಲಿ ಉಮಾ ಮಹದೇವನ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 18:25 IST
Last Updated 7 ನವೆಂಬರ್ 2025, 18:25 IST
ಕಾಂ ಡೀಲ್‌ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್‌ನಲ್ಲಿ ಶುಕ್ರವಾರ ಕಲಾ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಕಾಂ ಡೀಲ್‌ ಸಂಸ್ಥೆಯ ರಜತ ಮಹೋತ್ಸವ ಅಂಗವಾಗಿ ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್‌ನಲ್ಲಿ ಶುಕ್ರವಾರ ಕಲಾ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು.   

ಬೆಂಗಳೂರು: ‘ಆಟಿಸಂ ಸಹಿತ ನಾನಾ ದೈಹಿಕ, ಮನೋ ನ್ಯೂನತೆಗಳಿಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿರುವವರ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಜತೆಗೆ ಸರ್ಕಾರವೂ ನಿಲ್ಲಲಿದ್ದು, ಸಮುದಾಯದ ಬೆಂಬಲವೂ ಹೆಚ್ಚಿಬೇಕಿದೆ’ ಎಂದು ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್‌ ಹೇಳಿದರು.

ದೊಮ್ಮಲೂರಿನ ಬೆಂಗಳೂರು ಇಂಟರ್‌ ನ್ಯಾಷನಲ್‌ ಸೆಂಟರ್‌ನಲ್ಲಿ (ಬಿಐಸಿ) ಶುಕ್ರವಾರ ನಡೆದ ದಿ ಕಾಂ ಡೀಲ್‌ ಟ್ರಸ್ಟ್‌ (ಟಿಸಿಡಿಟಿ) ಸಂಸ್ಥೆಯ ರಜತಮಹೋತ್ಸವ ಸಮಾರಂಭದಲ್ಲಿ ಸಾಕ್ಷ್ಯಚಿತ್ರ ಹಾಗೂ ಕಾಫಿ ಟೇಬಲ್‌ ಪುಸ್ತಕ ಜನಾರ್ಪಣೆ ಮಾಡಿ, ಮಾತನಾಡಿದರು.

‘ವಿಶೇಷ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡಲು 4 ಸಾವಿರಕ್ಕೂ ಅಧಿಕ ಶಾಲೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಅಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ. 70 ಸಾವಿರದಷ್ಟು ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯೂ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ಕ್ಷೇತ್ರದಲ್ಲಿ ತಜ್ಞತೆ ಹೊಂದಿರುವ ಡಾ.ಪ್ರತಿಭಾ ಕಾರಂತ್‌ ಅಂಥಹವರು ವಿಶೇಷ ಶಾಲೆ, ಅಂಗನವಾಡಿಗಳಲ್ಲೂ ಮಕ್ಕಳು ಮತ್ತು ಪೋಷಕರಲ್ಲಿ ಅರಿವು ಹೆಚ್ಚಿಸಿ, ಥೆರೆಪಿಯಂತಹ ಚಟುವಟಿಕೆ ರೂಪಿಸುವ ಮೂಲಕ ಸಹಭಾಗಿತ್ವವನ್ನೂ ಹೊಂದಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಮಕ್ಕಳಲ್ಲಿ ಕಂಡು ಬರುವ ‘ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌’ ಅನ್ನು ಬೇಗ ಗುರುತಿಸಿ ಅವರಿಗೆ ಲಭ್ಯ ಇರುವ ಚಿಕಿತ್ಸೆಯನ್ನು ಪೋಷಕರು ಕೊಡಿಸಬೇಕು. ಕುಟುಂಬದ ಜತೆಗೆ ಸಮುದಾಯವೂ ನಿಂತಾಗ ಮಕ್ಕಳಲ್ಲಿ ಮನೋಸ್ಥೈರ್ಯ ಹೆಚ್ಚಲಿದೆ. ಸಕಾಲಕ್ಕೆ ಚಿಕಿತ್ಸೆ, ಮಾರ್ಗದರ್ಶನ ಸಿಕ್ಕರೆ ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ’ ಎಂದರು.

ಸಂಸ್ಥೆ ವೆಬ್‌ಸೈಟ್‌ ಹಾಗೂ ಆ್ಯಪ್‌ ಜನಾರ್ಪಣೆಗೊಳಿಸಿದ ತಿರುವನಂತಪುರದ ಕ್ಯಾಡ್ರೆ ಟೆಕ್ನೋಪಾರ್ಕ್‌ ಹಾಗೂ ನಿಶ್ ಸಂಸ್ಥೆಯ ಸಂಸ್ಥಾಪಕ ಜಿ.ವಿಜಯರಾಘವನ್‌, ‘ಕೇರಳದಲ್ಲಿ ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದ ಬೆಂಬಲ ಚೆನ್ನಾಗಿದೆ. ಸಮುದಾಯವೂ ಕುಟುಂಬಗಳಿಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ’ ಎಂದರು.

ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಡಾ.ಪ್ರತಿಭಾ ಕಾರಂತ್ ಅವರು ಸಂಸ್ಥೆ ನಡೆದು ಬಂದ ಹಾದಿ, ಎದುರಿಸಿದ ಕಠಿಣ ಕ್ಷಣಗಳು, ಮಕ್ಕಳು ಹಾಗೂ ಕುಟುಂಬಗಳಿಗೆ ಸಿಕ್ಕಿರುವ ಬೆಂಬಲದ ಕುರಿತು ವಿವರ ಹಂಚಿಕೊಂಡರು. 

‘ಕಾಂ ಡೀಲ್ ಸಂಸ್ಥೆಯು 2000ರಲ್ಲಿ ಆರಂಭಗೊಂಡಿದ್ದು, ಆಟಿಸಂ ಕಾಣಿಸಿಕೊಂಡ ನೂರಾರು ಮಕ್ಕಳಲ್ಲಿ ಜಾಗೃತಿ ಮೂಡಿಸಿ ಮಾರ್ಗದರ್ಶನ ನೀಡಿದೆ. ಆಟಿಸಂ ಬಗ್ಗೆ ನಿರಂತರವಾಗಿ ವೈಜ್ಞಾನಿಕ ತಿಳಿವಳಿಕೆ, ತರಬೇತಿಗಳನ್ನು ಮಕ್ಕಳು, ಪೋಷಕರಿಗೆ ಒದಗಿಸುತ್ತಿದೆ’ ಎಂದು ಹೇಳಿದರು.

ಗಮನ ಸೆಳೆದ ಪ್ರದರ್ಶನ

ಕಾಂ ಡೀಲ್‌ ಟ್ರಸ್ಟ್‌ನೊಂದಿಗೆ ಗುರುತಿಸಿಕೊಂಡಿರುವ ಹಾಗೂ ಸಹಭಾಗಿತ್ವ ಹೊಂದಿರುವ ಕೆಲವು ಸಂಸ್ಥೆಗಳಲ್ಲಿ ಶಿಕ್ಷಣ ತರಬೇತಿ ಪಡೆಯುತ್ತಿರುವ ಮಕ್ಕಳು ರೂಪಿಸಿದ ವಿವಿಧ ಕಲಾಕೃತಿಗಳ ಪ್ರದರ್ಶನವೂ ಈ ವೇಳೆ ಗಮನ ಸೆಳೆಯಿತು.  ಮಕ್ಕಳು ರೂಪಿಸಿದ ಹಣತೆ ಮೇಣದ ಉತ್ಪನ್ನಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಯಿತು. ಹಲವರು ಈ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.