ADVERTISEMENT

ಯಶಸ್ಸಿನತ್ತ ‘ನಮ್ಮ ಯಾತ್ರಿ’ ಪಯಣ: ಆಟೊ ಚಾಲಕರೇ ಒಗ್ಗೂಡಿ ಅಭಿವೃದ್ಧಿಪಡಿಸಿದ ಆ್ಯಪ್

ನಾಲ್ಕೇ ತಿಂಗಳಲ್ಲಿ ₹6.52 ಕೋಟಿ ವಹಿವಾಟು

ವಿಜಯಕುಮಾರ್‌ ಎಸ್‌.ಕೆ
Published 12 ಮಾರ್ಚ್ 2023, 23:12 IST
Last Updated 12 ಮಾರ್ಚ್ 2023, 23:12 IST
ನಮ್ಮ ಯಾತ್ರಿ ಲಾಂಛನ
ನಮ್ಮ ಯಾತ್ರಿ ಲಾಂಛನ   

ಬೆಂಗಳೂರು: ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ‘ನಮ್ಮ ಯಾತ್ರಿ’ ಆ್ಯಪ್ ಆಧಾರಿತ ಸೇವೆ ಈಗ ಬೇರೆ ಆ್ಯಪ್‌ಗಳಿಗೆ ಸಡ್ಡು ಹೊಡೆಯಲು ಸಜ್ಜಾಗಿದೆ. ಯಶಸ್ಸಿನ ಹಾದಿಯಲ್ಲಿದ್ದು, ನಾಲ್ಕು ತಿಂಗಳಲ್ಲಿಯೇ ₹6.52 ಕೋಟಿ ವಹಿವಾಟು ನಡೆಸಿದೆ.

ನವೆಂಬರ್ 1ರಿಂದ ಅಧಿಕೃತ ಸೇವೆ ಆರಂಭವಾಗಿದ್ದು, ಈವರೆಗೆ 3.81 ಲಕ್ಷ ಪ್ರಯಾಣಿಕರು ಈ ಆ್ಯಪ್ ಬಳಕೆ ಮಾಡಿದ್ದಾರೆ. 42 ಸಾವಿರಕ್ಕೂ ಹೆಚ್ಚು ಚಾಲಕರು ಈ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದು, 3.95 ಲಕ್ಷ ಟ್ರಿಪ್‌ಗಳನ್ನು ಚಾಲಕರು ನಿರ್ವಹಿಸಿದ್ದಾರೆ.

ನಿತ್ಯ ಸರಾಸರಿ 10 ಸಾವಿರ ಟ್ರಿಪ್‌ ನಿರ್ವಹಿಸಲಾಗುತ್ತಿದೆ. 8 ಸಾವಿರ ಮಂದಿ ಪ್ರಯಾಣಿಕರು ನಿತ್ಯ ನೋಂದಣಿ ಮಾಡಿಕೊಳ್ಳುತ್ತಿದ್ದು, ಪ್ರತಿನಿತ್ಯ ₹16 ಲಕ್ಷ ವಹಿವಾಟು ನಡೆಯುತ್ತಿದೆ.

ADVERTISEMENT

ನಗರದ ಹೊರವಲಯದ ಪ್ರದೇಶಗಳಲ್ಲೇ ‘ನಮ್ಮ ಯಾತ್ರಿ’ ಆ್ಯಪ್ ಬಳಕೆ ಹೆಚ್ಚಿನ ಪ್ರಮಾಣದಲ್ಲಿದೆ. ಆ್ಯಪ್ ಬಳಕೆದಾರ ಪ್ರದೇಶಗಳಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ಮೊದಲ ಸ್ಥಾನದಲ್ಲಿದ್ದರೆ, ಬಿಟಿಎಂ ಲೇಔಟ್, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಕ್ಷೇತ್ರಗಳು ಕ್ರಮವಾಗಿ ಮೊದಲ ಐದು ಸ್ಥಾನಗಳ ಪಟ್ಟಿಯಲ್ಲಿವೆ.

ಓಲಾ, ಉಬರ್, ರ್‍ಯಾಪಿಡೊ ಸೇರಿ ಅಗ್ರಿಗೇಟರ್ ಕಂಪನಿಗಳ ಆಟೊ ಸೇವೆಗೂ ದುಬಾರಿ ದರ ವಿಧಿಸುತ್ತಿದ್ದವು. ಜಿಎಸ್‌ಟಿ ಜತೆಗೆ ಕನ್ವೀನಿಯನ್ಸ್‌ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದವು. ಇದರಿಂದ ಬೇಸತ್ತಿದ್ದ ಪ್ರಯಾಣಿಕರು ಮತ್ತು ಆಟೊ ಚಾಲಕರು ಈಗ ‘ನಮ್ಮ ಯಾತ್ರಿ’ ಕಡೆಗೆ ಮುಖ ಮಾಡಿದ್ದಾರೆ.

ಪ್ರಯಾಣಿಕರು ತಮ್ಮ ಪ್ರಯಾಣ ರದ್ದುಗೊಳಿಸಿದರೆ ₹ 50 ದಂಡ ವಸೂಲಿಯನ್ನೂ ಅಗ್ರಿಗೇಟರ್ ಕಂಪನಿಗಳು ವಿಧಿಸುತ್ತಿದ್ದವು. ಈ ವ್ಯವಸ್ಥೆಯನ್ನು ‘ನಮ್ಮ ಯಾತ್ರಿ’ ಹೊಂದಿರುವುದಿಲ್ಲ ಎಂದು ಒಕ್ಕೂಟದ ಕಾರ್ಯದರ್ಶಿ ರುದ್ರಮೂರ್ತಿ ಹೇಳುತ್ತಾರೆ.

‘ನವೆಂಬರ್ 1ರಿಂದ ‘ನಮ್ಮ ಯಾತ್ರಿ’ ಸೇವೆ ಅಧಿಕೃತವಾಗಿ ಆರಂಭವಾಗಿ‌ದೆ. ‘ನಮ್ಮ ಯಾತ್ರಿ’ ಸೇವೆ ಓಪನ್ ಮೊಬಿಲಿಟಿ ನೆಟ್‌ವರ್ಕ್‌ ಆಗಿರುವುದರಿಂದ ಎಲ್ಲಾ ಮಾಹಿತಿಯೂ ವೆಬ್‌ಸೈಟ್‌ನಲ್ಲಿ(nammayatri.in) ಕ್ಷಣ ಕ್ಷಣಕ್ಕೂ ಅಪಡೇಟ್ ಆಗುತ್ತಿದೆ.

‘ಸಂಪೂರ್ಣ ಪಾರದರ್ಶಕತೆಯಿಂದ ಕೂಡಿದೆ. ಯಾರು ಬೇಕಿದ್ದರೂ ವೆಬ್‌ಸೈಟ್ ತೆರೆದು ನೋಡಬಹುದು. ಸರ್ಕಾರ ಮತ್ತು ಪ್ರಯಾಣಿಕರು ಕೂಡ ಈ ಮಾಹಿತಿಯನ್ನು ಪಡೆಯಬಹುದು‘ ಎಂದು ಅವರು ಹೇಳಿದರು.

ದುಬಾರಿ ದರ ಇಲ್ಲ, ಮಧ್ಯವರ್ತಿ ಶುಲ್ಕ ಇಲ್ಲ
ಆಟೊ ಚಾಲಕರ ಒಕ್ಕೂಟವು ಖಾಸಗಿ ಸಂಸ್ಥೆಯಿಂದ ತಾಂತ್ರಿಕ ನೆರವು ಪಡೆದು ಈ ಆ್ಯಪ್ ಅಭಿವೃದ್ಧಿಪಡಿಸಿದೆ.

ಜಿಲ್ಲಾಡಳಿತ ನಿಗದಿ ಮಾಡಿರುವ ದರದಲ್ಲೇ (ಮೊದಲ ಎರಡು ಕಿಲೋ ಮೀಟರ್‌ಗೆ ₹30 ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ₹15) ಆಟೊರಿಕ್ಷಾಗಳನ್ನು ಚಾಲನೆ ಮಾಡಲಾಗುತ್ತಿದೆ.

ಆಟೊ ನಿಲ್ದಾಣದಿಂದ ಮನೆ ತನಕ ರಿಕ್ಷಾಗಳನ್ನು ತಂದು, ಪ್ರಯಾಣಿಕರ ಕರೆದೊಯ್ಯುವುದರಿಂದ ಪಿಕಪ್ ಶುಲ್ಕವಾಗಿ ₹10 ಹೆಚ್ಚುವರಿ ಪಡೆಯಲಾಗುತ್ತಿದೆ. ಈ ಆ್ಯಪ್‌ನಲ್ಲಿ ಆಟೊರಿಕ್ಷಾ ಹೊರತಾಗಿ ಬೇರೆ ವಾಹನಗಳ ಸೇವೆ ಇಲ್ಲ. ಮಧ್ಯವರ್ತಿ ಶುಲ್ಕ ಯಾವುದೂ ಇಲ್ಲದೆ ಸಂಪೂರ್ಣ ಹಣ ಚಾಲಕರಿಗೆ ಸಂದಾಯವಾಗುತ್ತಿದೆ ಎಂದು ರುದ್ರಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.