
ಬೆಂಗಳೂರು: ಕಾರು ಗುದ್ದಿಸಿ ಗೋಪಿ (55) ಎಂಬುವವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುನಿಕೃಷ್ಣ (56) ಅವರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಕೋಣನಕುಂಟೆ ಹರಿನಗರದ ಗೋಪಿ, ಆಟೊ ಚಾಲಕ. ವಾಜರಹಳ್ಳಿ 100 ಅಡಿ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಯಾವುದೋ ಕಾರು ಗುದ್ದಿದ್ದರಿಂದ ಅವರು ಮೃತಪಟ್ಟಿರುವುದಾಗಿ ಕೆಲವರು ಹೇಳಿದ್ದರು. ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಇದೊಂದು ಕೊಲೆ ಎಂಬುದು ಗೊತ್ತಾಯಿತು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದರು.
‘ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಲಾಗಿದೆ. ಸಂಚಾರ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು, ಕಾನೂನು ಸುವ್ಯವಸ್ಥೆ ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಹೇಳಿದರು.
ಬಾರ್ ಮುಂದೆ ಜಗಳ: ‘ಗೋಪಿ ಅವರು ಮಾರ್ಚ್ 23ರಂದು ರಾತ್ರಿ ಬಾರ್‌ಗೆ ಹೋಗಿದ್ದರು. ಅಲ್ಲಿಯೇ ಆರೋಪಿ ಕೋಣನಕುಂಟೆಯ ಮುನಿಕೃಷ್ಣ ಹಾಗೂ ಅವರ ಸ್ನೇಹಿತ, ಮದ್ಯ ಕುಡಿಯುತ್ತಿದ್ದರು. ಅವರಿಬ್ಬರಿಗೆ ಅಲ್ಲಿಯೇ ಗೋಪಿ ಪರಿಚಯವಾಗಿತ್ತು. ನಂತರ, ಮೂವರು ಒಟ್ಟಿಗೆ ಕುಳಿತು ಮದ್ಯ ಕುಡಿದಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಬಾರ್‌ನಿಂದ ಹೊರಬಂದಿದ್ದ ಗೋಪಿ ಹಾಗೂ ಮುನಿಕೃಷ್ಣ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಶುರುವಾಗಿತ್ತು. ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಜಗಳ ಬಿಡಿಸಿದ್ದ ಸ್ನೇಹಿತ, ಇಬ್ಬರನ್ನೂ ಕಾರಿನತ್ತ ಕರೆದೊಯ್ದಿದ್ದರು’ ಎಂದು ಹೇಳಿದರು.
‘ಮುನಿಕೃಷ್ಣ ಅವರಿಗೆ ಚಪ್ಪಲಿಯಿಂದ ಹೊಡೆಯಲು ಗೋಪಿ ಮುಂದಾಗಿದ್ದರು. ಅದನ್ನು ತಡೆದಿದ್ದ ಸ್ನೇಹಿತ, ಗೋಪಿಯನ್ನು ಕರೆದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ. ಆರೋಪಿ, ಕಾರಿನಲ್ಲಿ ಹಿಂಬಾಲಿಸಿದ್ದ. ಮಾರ್ಗಮಧ್ಯೆ ಗೋಪಿಗೆ ಕಾರು ಗುದ್ದಿಸಿದ್ದ. ತೀವ್ರ ಗಾಯಗೊಂಡು ಗೋಪಿ ಮೃತಪಡುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಸ್ನೇಹಿತ ಸಹ ಓಡಿ ಹೋಗಿದ್ದ’ ಎಂದರು.
‘ಅಂಗಿಯ ಮೇಲಿದ್ದ ಟೈಲರ್ ಸ್ಟಿಕ್ಕರ್ ಮೂಲಕ ಗೋಪಿ ಹೆಸರು ಹಾಗೂ ವಿಳಾಸ ಗೊತ್ತಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ, ಕಾರು ಗುದ್ದಿಸಿ ಕೊಲೆ ಮಾಡಿದ್ದು ಕಂಡುಬಂದಿತ್ತು. ಮಾಲೂರಿನಲ್ಲಿದ್ದ ಸ್ನೇಹಿತನನ್ನು ವಿಚಾರಿಸಿದಾಗ, ಗಲಾಟೆ ವಿಷಯ ತಿಳಿಯಿತು’ ಎಂದು ಹೇಳಿದರು.
‘ಆತ್ಮಹತ್ಯೆಗೆ ಯತ್ನಿಸಿದ್ದ ಸ್ನೇಹಿತ’
‘ಮುನಿಕೃಷ್ಣನ ಸ್ನೇಹಿತ ಘಟನೆ ಬಳಿಕ ಮಾಲೂರಿಗೆ ಹೋಗಿದ್ದ. ಕೊಲೆಯಿಂದ ಹೆದರಿದ್ದ ಈತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬಸ್ಥರು ಈತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.