ADVERTISEMENT

ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನ ಕೊಲೆ: ದುಷ್ಕರ್ಮಿಗಳು ಪರಾರಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 15:45 IST
Last Updated 1 ಜನವರಿ 2026, 15:45 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕರೊಬ್ಬರನ್ನು ಅವರ ಮನೆಯ ಎದುರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಕೊಳ್ಳೆಗಾಲದ ರೇಚಣ್ಣ (45) ಕೊಲೆಯಾದವರು.

ADVERTISEMENT

ರೇಚಣ್ಣ ಅವರು ಕೆಲವು ವರ್ಷಗಳಿಂದ ಕೆ.ಪಿ.ಅಗ್ರಹಾರದಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಆಟೊ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಬುಧವಾರ ತಡರಾತ್ರಿ 11.40ರ ಸುಮಾರಿಗೆ ರೇಚಣ್ಣ ಮನೆಯಿಂದ ಹೊರಗಡೆ ಬಂದಿದ್ದರು. ಆಗ ಸ್ಥಳಕ್ಕೆ ಬಂದ ದುಷ್ಕರ್ಮಿಗಳು, ಅವರ ಬೆನ್ನಿಗೆ ಇರಿದು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಬೆನ್ನಿಗೆ ಇರಿದ ಪರಿಣಾಮ ತೀವ್ರ ಗಾಯಗೊಂಡಿದ್ದ ರೇಚಣ್ಣ ಅವರು ಮನೆ ಮುಂದೆಯೇ ಬಿದ್ದಿದ್ದರು. ಮದ್ಯ ಸೇವಿಸಿ ಮಲಗಿರಬಹುದು ಎಂದು ಸ್ಥಳೀಯರು ಆರಂಭದಲ್ಲಿ ಭಾವಿಸಿದ್ದರು. ಆದರೆ, ಕೆಲ ಹೊತ್ತಿನ ಬಳಿಕ ರೇಚಣ್ಣನ ಬಳಿ ಬಂದು ನೋಡಿದಾಗ ರಕ್ತಸ್ರಾವದಿಂದ ಮೃತಪಟ್ಟಿರುವುದು ಗೊತ್ತಾಗಿತ್ತು. ಕೃತ್ಯದ ಮಾದರಿ ಗಮನಿಸಿದರೆ ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಲಾಗಿದೆ ಎಂಬಂತೆ ಕಂಡುಬರುತ್ತಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.