ADVERTISEMENT

ಬೈಕ್ ಟ್ಯಾಕ್ಸಿ ವಿರುದ್ಧ ಆಟೊ ಚಾಲಕರ ಆಕ್ರೋಶ- ಪ್ರತಿಭಟನೆ

ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ: ಚಾಲಕರ ಬಂಧನ, ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 0:28 IST
Last Updated 30 ಡಿಸೆಂಬರ್ 2022, 0:28 IST
ಅರಮನೆ ರಸ್ತೆಯಲ್ಲಿ ಆಟೊ ರಿಕ್ಷಾಗಳು ಸಾಲಗಟ್ಟಿ ನಿಂತಿರುವುದು
ಅರಮನೆ ರಸ್ತೆಯಲ್ಲಿ ಆಟೊ ರಿಕ್ಷಾಗಳು ಸಾಲಗಟ್ಟಿ ನಿಂತಿರುವುದು   

ಬೆಂಗಳೂರು: ನಗರದಲ್ಲಿ ಅನಧಿಕೃತ ಬೈಕ್‌ ಟ್ಯಾಕ್ಸಿ ಸಂಚಾರಕ್ಕೆ ಕಡಿವಾಣ ಹಾಕಬೇಕು ಮತ್ತು ಎಲೆಕ್ಟ್ರಿಕ್ ಬೈಕ್‌ ಟ್ಯಾಕ್ಸಿಗೆ ನೀಡಿರುವ ಅನುಮತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಆಟೊ ಚಾಲಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ವಿಧಾನಸೌಧ ಚಲೊ ನಡೆಸಲು ಮುಂದಾದ ನೂರಾರು ಚಾಲಕರನ್ನು ಪೊಲೀಸರು ಬಂಧಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿದ ಸಾವಿರಾರು ಆಟೊ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ಮೊಳಗಿಸಿದರು. ಸ್ವಾತಂತ್ರ್ಯ ಉದ್ಯಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೆಲ್ಲೂ ಖಾಕಿದಾರಿ ಆಟೊ ಚಾಲಕರ ದಂಡೇ ನೆರೆದಿತ್ತು. 21 ಆಟೊ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಿದರು. ಆಟೊ ರಿಕ್ಷಾಗಳಲ್ಲೇ ಬಂದಿದ್ದರಿಂದ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು.

‘ಈಗಾಗಲೇ ಅನಧಿಕೃತವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುತ್ತಿವೆ. ಅದರ ಜತೆಗೆ ಬೈಕ್ ಟ್ಯಾಕ್ಸಿ ಸೇವೆ ಅಧಿಕೃತಗೊಳಿಸಲು ಸರ್ಕಾರ ಮುಂದಾದೆ. ಆ ಮೂಲಕ ಆಟೊ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರವೇ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಗರದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಆಟೊರಿಕ್ಷಾ ಚಾಲನೆ ಮಾಡಿ ಜೀವನ ನಡೆಸುತ್ತಿದ್ದಾರೆ. ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವ ಬದಲು ಆಟೊ ಚಾಲಕರಿಗೆ ಅನುಕೂಲ ಆಗುವಂತೆ ಎಲೆಕ್ಟ್ರಿಕ್ ಆಟೊರಿಕ್ಷಾಗಳಿಗೆ ಶೇ 50ರಷ್ಟು ಸಹಾಯಧನ ನೀಡಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಹೇಮಂತಕುಮಾರ್ ಬಂದು ಮನವಿ ಸ್ವೀಕರಿಸಿದರು. ‘ಚಾಲಕರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಈ ಉತ್ತರಕ್ಕೆ ತೃಪ್ತರಾಗದ ಚಾಲಕರು, ವಿಧಾನಸೌಧ ಚಲೊ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ನೂರಾರು ಚಾಲಕರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಸರ್ಕಾರಕ್ಕೆ ಏಳು ದಿನ ಗಡುವು

‘ವಿಧಾನಸೌಧ ಚಲೊ ನಡೆಸಲು ಮುಂದಾದ ಚಾಲಕರನ್ನು ಬಂಧಿಸಿರುವ ಸರ್ಕಾರಕ್ಕೆ ನಮ್ಮ ಬೇಡಿಕೆ ಈಡೇರಿಸಲು ಏಳು ದಿನಗಳ ಗಡುವು ನೀಡಲಾಗಿದೆ’ ಎಂದು ಬೆಂಗಳೂರು ಆಟೊ ಚಾಲಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಮಂಜುನಾಥ್ ಹೇಳಿದರು.

‘ಸರ್ಕಾರ ನಮ್ಮ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿ ಬೈಕ್ ಟ್ಯಾಕ್ಸಿ ಸೇವೆ ಅಧಿಕೃತಗೊಳಿಸಿದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು. ಅಲ್ಲದೇ, ಬೈಕ್ ಟ್ಯಾಕ್ಸಿಗಳನ್ನು ರಸ್ತೆಯಲ್ಲೇ ಸುಟ್ಟು ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.

ಎಲ್ಲೆಲ್ಲೂ ಆಟೋರಿಕ್ಷಾ

ಅರಮನೆ ರಸ್ತೆ, ರಾಮಚಂದ್ರ ರಸ್ತೆಯಲ್ಲಿ ಸಾವಿರಾರು ಆಟೋರಿಕ್ಷಾಗಳನ್ನು ನಿಲ್ಲಿಸಿ ಪ್ರತಿಭಟನಾ ಸ್ಥಳಕ್ಕೆ ಬರಲು ಪೊಲೀಸರು ವ್ಯವಸ್ಥೆ ಮಾಡಿದರು. ಪ್ರತಿಭಟನೆಗೆ ಬರುವ ರಿಕ್ಷಾಗಳನ್ನು ಮೈಸುರು ಬ್ಯಾಂಕ್ ವೃತ್ತ, ಕಾರ್ಪೊರೇಷನ್ ವೃತ್ತ ಸೇರಿ ಹಲವೆಡೆ ತಡೆದು ನಿಲ್ಲಿಸಿದರು.

ರಿಕ್ಷಾ ನಿಲ್ಲಿಸಿ ನಡೆದುಕೊಂಡು ಹೋಗಲು ಸೂಚಿಸಿದರು. ಇನ್ನೊಂದೆಡೆ ಪ್ರತಿಭಟನೆಯಲ್ಲಿ ಭಾಗವಹಿಸದೆ ಆಟೊ ಸೇವೆ ಒದಗಿಸುತ್ತಿದ್ದವರನ್ನು ಕೆಲ ಚಾಲಕರು ತಡೆದು ನಿಲ್ಲಿಸಿದ ಪ್ರಸಂಗಗಳೂ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.