ADVERTISEMENT

ಫೈನಾನ್ಸ್ ಡೀಲರ್ ಹೆಸರಿನಲ್ಲಿ ವಂಚನೆ: 12 ಆಟೊ ಜಪ್ತಿ

ನೋಂದಣಿ ಸಂಖ್ಯೆ ಫಲಕ ಬದಲಿಸಿ ಮಾರುತ್ತಿದ್ದ ಜಾಲ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 23:50 IST
Last Updated 15 ಫೆಬ್ರುವರಿ 2024, 23:50 IST
   

ಬೆಂಗಳೂರು: ಫೈನಾನ್ಸ್ ಡೀಲರ್‌ ಹೆಸರಿನಲ್ಲಿ ಆಟೊ ಜಪ್ತಿ ಮಾಡಿ ನೋಂದಣಿ ಸಂಖ್ಯೆ ಫಲಕ ಬದಲಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿರುವ ಭಾರತಿನಗರ ಪೊಲೀಸರು, 12 ಆಟೊ ಜಪ್ತಿ ಮಾಡಿದ್ದಾರೆ.

‘ಆಟೊ ಚಾಲಕ ಸೈಯದ್ ಮೌಲಾ ವಂಚನೆ ಜಾಲದ ಬಗ್ಗೆ ಫೆ.3ರಂದು ದೂರು ನೀಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಮೋಸಿನ್ ಖಾನ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಸೈಯದ್ ಮೌಲಾ 2014ರಲ್ಲಿ ವಿ.ಎಂ. ಫೈನಾನ್ಸ್ ಮೂಲಕ ಆಟೊ ಖರೀದಿಸಿದ್ದರು. ಪ್ರತಿ ತಿಂಗಳು ₹6,200 ಕಂತು ಕಟ್ಟುತ್ತಿದ್ದರು. ಕೆಲ ತಿಂಗಳಿನಿಂದ ಕಂತು ತುಂಬಲು ಸಾಧ್ಯವಾಗಿರಲಿಲ್ಲ. ಆರೋಪಿಗಳು, ಫೈನಾನ್ಸ್ ಡೀಲರ್‌ಗಳ ಹೆಸರಿನಲ್ಲಿ ಸೈಯದ್ ಅವರ ಆಟೊ ಜಪ್ತಿ ಮಾಡಿ ಕೊಂಡೊಯ್ದಿದ್ದರು. ನೋಂದಣಿ ಸಂಖ್ಯೆ ಬದಲಿಸಿ ರಾಯಚೂರಿನಲ್ಲಿ ಮಾರಿದ್ದರು. ಆಟೊ ನೋಂದಣಿ ಫಲಕ ಬದಲಾಯಿಸಿ ಮಾರುವುದನ್ನೇ ಆರೋಪಿಗಳು ವೃತ್ತಿ ಮಾಡಿಕೊಂಡಿದ್ದರು’ ಎಂದು ಹೇಳಿದರು.

ADVERTISEMENT

ಮತ್ತೊಬ್ಬನ ವಿಚಾರಣೆ: ‘ಮೋಸಿನ್ ನೀಡಿದ್ದ ಹೇಳಿಕೆ ಆಧರಿಸಿ, ಸೈಫುಲ್ಲಾ ಖಾನ್‌ ಎಂಬಾತನಿಗೆ ಸಿಆರ್‌ಪಿಸಿ 41 (ಎ) ಅಡಿ ನೋಟಿಸ್ ನೀಡಲಾಗಿತ್ತು. ಠಾಣೆಗೆ ಬಂದಿದ್ದ ಸೈಫುಲ್ಲಾನನ್ನು ವಿಚಾರಣೆ ನಡೆಸಲಾಯಿತು. ಇನ್ನೂ 9 ಆಟೊಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅವುಗಳ ಜಪ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಫೈನಾನ್ಸ್ ಡೀಲರ್ ಹೆಸರಿನಲ್ಲಿ ಚಾಲಕರನ್ನು ಬೆದರಿಸಿ ಆಟೊ ಜಪ್ತಿ ಮಾಡಿ ಮಾರುವ ಜಾಲ ಇದಾಗಿದೆ. ಇದರಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿಯಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.