ADVERTISEMENT

‘ಅನ್‌ಹರ್ಡ್‌ ಎಕೋಸ್‌’ ಕಿರುಚಿತ್ರಕ್ಕೆ ಅವಳ ಹೆಜ್ಜೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 16:27 IST
Last Updated 16 ಜೂನ್ 2025, 16:27 IST
   

ಬೆಂಗಳೂರು: ‘ಅವಳ ಹೆಜ್ಜೆ ಕಿರುಚಿತ್ರೋತ್ಸವ’ದಲ್ಲಿ ನಿರ್ದೇಶಕಿ ಕವಿತಾ ಬಿ. ನಾಯಕ್‌ ಅವರ ‘ಅನ್‌ಹರ್ಡ್‌ ಎಕೋಸ್‌’ ಎಂಬ ಕಿರುಚಿತ್ರ ಪ್ರಥಮ ಸ್ಥಾನ ಪಡೆದು, ಅವಳ ಹೆಜ್ಜೆ ಪ್ರಶಸ್ತಿ ಹಾಗೂ ₹ 1ಲಕ್ಷ ನಗದು ಬಹುಮಾನಕ್ಕೆ ಪಾತ್ರವಾಯಿತು.

ಗುಬ್ಬಿವಾಣಿ ಟ್ರಸ್ಟ್‌ ಶನಿವಾರ ಆಯೋಜಿಸಿದ್ದ ಅವಳ ಹೆಜ್ಜೆ ಕಿರುಚಿತ್ರೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

‘ಕವಿತಾ ಬಿ. ನಾಯಕ್ ರಂಗಭೂಮಿ ಕಲಾವಿದೆ ಮತ್ತು ನಿರ್ದೇಶಕಿಯಾಗಿದ್ದಾರೆ. ಸಿನಿಮಾ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಪ್ರೇಕ್ಷಕರಿಗೆ ತಲುಪಿಸಬೇಕೆಂಬ ಅವರ ಬದ್ಧತೆಯ ಪ್ರತಿಫಲವೇ ಅನ್‌ಹರ್ಡ್ ಎಕೋಸ್ ಕಿರುಚಿತ್ರ. ಈ ಕಿರುಚಿತ್ರ ಪ್ರೇಕ್ಷಕರ ಆಯ್ಕೆ ವಿಭಾಗದಲ್ಲೂ ಬಹುಮಾನ ಪಡೆದುಕೊಂಡಿತು’ ಎಂದು ಶಾಂತಲಾ ದಾಮ್ಲೆ ಹೇಳಿದರು.

ADVERTISEMENT

ಕ್ಷಮಾ ಅಂಬೆಕಲ್ಲು ನಿರ್ದೇಶನದ ‘ಪುಷ್ಪ’ ಕಿರುಚಿತ್ರವು ವಿಶೇಷ ವರ್ಗದಲ್ಲಿ ನಗದು ಬಹುಮಾನ ಪಡೆದುಕೊಂಡಿದೆ. ಮಂದಾರ ಬಟ್ಟಲಹಳ್ಳಿ ನಿರ್ದೇಶನದ ‘ದಿ ಲಾಸ್ಟ್ ಹ್ಯಾಪಿ ಕಸ್ಟಮರ್’ (2024), ಸಿಂಚನಾ ಶೈಲೇಶ್ ನಿರ್ದೇಶನದ ‘ಕೇಕ್‌ವಾಕ್’ (2025) ಮತ್ತು ಸತ್ಯ ಪ್ರಮೋದ ಎಂ.ಎಸ್ ನಿರ್ದೇಶನದ ‘ಆನ್‌ಲೈನ್’ (2025) ಕಿರುಚಿತ್ರಗಳು ಚೊಚ್ಚಲ ನಿರ್ದೇಶನ ವಿಭಾಗದಲ್ಲಿ ನಗದು ಬಹುಮಾನಗಳನ್ನು ಪ‍ಡೆದವು. ಹಾವೇರಿ ಜಿಲ್ಲೆಯ ರೈತ ಮಹಿಳೆ ರೇಣುಕಾ ಯಲ್ಲಪ್ಪ ಮಲ್ಲಿಗಾರ್ ನಿರ್ಮಿಸಿದ ‘ನೀರೆಲ್ಲವೂ ತೀರ್ಥ’ ಎಂಬ ಕಿರುಚಿತ್ರವನ್ನು ಸ್ಪರ್ಧಾತ್ಮಕವಲ್ಲದ ವಿಭಾಗದಲ್ಲಿ ಪ್ರದರ್ಶಿಸಲಾಯಿತು.

ಕಿರುಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾದಲ್ಲಿ ಮಹಿಳಾ ಧ್ವನಿ ಎಂಬ ವಿಷಯದ ಕುರಿತು ನಿರ್ದೇಶಕಿ ರೂಪಾ ರಾವ್, ಟೆಂಟ್‌ ಸಿನಿಮಾ ಶಾಲೆಯ ಸ್ಥಾಪಕಿ, ನಿರ್ದೇಶಕಿ ಸಿ.ಎಸ್. ಶೋಭಾ, ನಿರ್ದೇಶಕಿ ಡಿ. ಸುಮನ್ ಕಿತ್ತೂರು ಭಾಗವಹಿಸಿದ್ದರು. 

‘ಇದು ಕೇವಲ ಕಿರುಚಿತ್ರ ಪ್ರದರ್ಶನವಲ್ಲ, ಮಹಿಳೆಯರ ಅನುಭವ, ದೃಷ್ಟಿಕೋನಗಳಿಗೆ ವೇದಿಕೆ ನೀಡುವ, ಲಿಂಗ ಸಮಾನತೆಯ ಚಿಂತನೆ ಉತ್ತೇಜಿಸುವ ಒಂದು ಚಳವಳಿಯಾಗಿದೆ’ ಎಂದು ಟ್ರಸ್ಟ್‌ನ ಅಧ್ಯಕ್ಷೆ ಮಾಳವಿಕಾ ಗುಬ್ಬಿವಾಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.