
ಬೆಂಗಳೂರು: ‘ನಾನು ಮಾಂಸಾಹಾರದ ಬಗ್ಗೆ ಮಾತನಾಡುವುದಿಲ್ಲ. ಆಯುರ್ವೇದ ಪರಿಣಾಮಕಾರಿಯಾಗಬೇಕಾದರೆ ಯಾವುದೇ ಸಮುದಾಯದವರು ಇರಲಿ ಅವರು ಸಸ್ಯಾಹಾರವನ್ನು ಸೇವಿಸಬೇಕು’ ಎಂದು ಮೂಡಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಆಯುಷ್ ಸಚಿವಾಲಯ ಹಾಗೂ ರಾಜ್ಯ ಆಯುಷ್ ಇಲಾಖೆಯ ಸಹಯೋಗದಲ್ಲಿ ಕಜೆ ಆಯುರ್ವೇದಿಕ್ ಚಾರಿಟಬಲ್ ಫೌಂಡೇಷನ್ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಆಯುರ್ವೇದ ವಿಶ್ವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
‘ಆಧುನಿಕ ವೈದ್ಯ ಪದ್ಧತಿಯಲ್ಲಿ ಮಾತ್ರ ಅಡ್ಡಪರಿಣಾಮ ಇರುವುದು. ಆಯುರ್ವೇದದಲ್ಲಿ ಅಡ್ಡಪರಿಣಾಮ ಇಲ್ಲ. ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸಿದವರಿಗೆ ಆಯುರ್ವೇದ ಪರಿಣಾಮಕಾರಿಯಾಗುವುದಿಲ್ಲ’ ಎಂದು ತಿಳಿಸಿದರು.
‘ಅಂಗಾಂಗಗಳು ಸರಿ ಇರುವವರೇ ಶ್ರೀಮಂತರು. ಅವು ಸರಿ ಇಲ್ಲದೇ ಇದ್ದರೆ ಎಷ್ಟೇ ದುಡ್ಡಿದ್ದರೂ ಬಡವರು. ಆಧ್ಯಾತ್ಮ ಬೂಟಾಟಿಕೆಯಲ್ಲ. ಪ್ರತಿ ಆಚರಣೆಯಲ್ಲಿ ರಹಸ್ಯ ಇದೆ. ಆಧ್ಯಾತ್ಮ, ಆಯುರ್ವೇದ ಸ್ವೀಕರಿಸಿದವರು 120 ವರ್ಷ ಬದುಕುತ್ತಾರೆ’ ಎಂದರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ‘ಆಯುರ್ವೇದ ಜೀವನ ಪದ್ಧತಿ. ಅದರಂತೆ ಬದುಕಿದರೆ ಸ್ವಸ್ಥರಾಗಿರಬಹುದು. ಇಲ್ಲದೇ ಇದ್ದರೆ ಸುಸ್ತರಾಗಬಹುದು. ಸುಸ್ತಿನ ಬದುಕು ಬೇಡವೆಂದಾದರೆ ಆಯುರ್ವೇದ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
‘ಬದುಕು ಮತ್ತು ಸಾವನ್ನು ತಿಳಿಯಲು ಸಮಸ್ತ ಜನರು ಆಯುರ್ವೇದವನ್ನು ಅರಿಯಬೇಕು. ಜ್ಯೋತಿಷ ಕೂಡಾ ಸಾವಿನ ಬಗ್ಗೆ ಹೇಳಲು ಹಿಂಜರಿಯುತ್ತದೆ. ಆದರೆ, ಆಯುರ್ವೇದ ನಿಖರವಾಗಿ ಹೇಳುತ್ತದೆ. ಇಂಥ ಅದ್ಭುತ ವಿಜ್ಞಾನ, ವಿದ್ಯೆ, ಶಾಸ್ತ್ರವು ಮಂಗನ ಕೈಯಲ್ಲಿ ಸಿಕ್ಕಿದ ಮಾಣಿಕ್ಯದಂತಾಗಿದೆ. ಮೂಲೆಗೆ ತಳ್ಳಿ ಬಿಟ್ಟಿದ್ದೇವೆ. ಪಾಶ್ಚಾತ್ಯರಿಗೆ ಈ ವಿದ್ಯೆ ಸಿಕ್ಕಿದ್ದರೆ ಅವರು ಹೊತ್ತು ಮೆರೆಯುತ್ತಿದ್ದರು. ಅನರ್ಘ್ಯ ರತ್ನವನ್ನು ಉಳಿಸಲು ಸರ್ಕಾರ ಪ್ರಯತ್ನ ಮಾಡಬೇಕು. ಸರ್ಕಾರ ಮಾಡದೇ ಇದ್ದರೂ ನಾವು ಮಾಡಬೇಕು. ಆಯುರ್ವೇದದಿಂದ ನಾವು ಉಳಿದುಕೊಂಡಿದ್ದೇವೆ. ನಾವು ಆಯುರ್ವೇದವನ್ನು ಉಳಿಸಬೇಕು’ ಎಂದರು.
ಕಾರ್ಯಕ್ರಮದ ರೂವಾರಿ ಡಾ. ಗಿರಿಧರ್ ಕಜೆ ಮಾತನಾಡಿ, ‘ಎಲ್ಲ ಔಷಧಗಳು ಜನರಿಗೆ ತಲುಪಿದರೆ ಎಲ್ಲರಿಗೂ ಆರೋಗ್ಯ ಸಿಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಈ ಯೋಚನೆಯೇ ತಪ್ಪಾದುದು. ಈಗಾಗಲೇ ಕೆಮಿಕಲ್ ಸಿಂಥೆಟಿಕ್ ಔಷಧ ಎಲ್ಲರ ದೇಹಕ್ಕೆ ಸೇರಿ ದೇಹವೇ ದುರ್ಬಲಗೊಂಡಿದೆ. ಆರೋಗ್ಯ ತಲುಪುವ ಬದಲು ರೋಗಗಳು ಎಲ್ಲರಿಗೂ ತಲುಪಿವೆ. ದೇಹವು ಔಷಧ ಸಂಗ್ರಹಿಸುವ ವಸ್ತು ಎಂಬಂತಾಗಿದೆ. ಎಲ್ಲ ಜನರಿಗೆ ಔಷಧದ ಬದಲು ಆಯುರ್ವೇದ ತಲುಪಿದರೆ ಆರೋಗ್ಯ ಉಳಿಯಲಿದೆ’ ಎಂದು ಹೇಳಿದರು.
ಸಂಪನ್ನಗೊಂಡ ಸಮ್ಮೇಳನ
ನಾಲ್ಕು ದಿನ ನಡೆದ ಆಯುರ್ವೇದ ಸಮ್ಮೇಳನದಲ್ಲಿ 1000ಕ್ಕೂ ಅಧಿಕ ಪ್ರಬಂಧಗಳು ಮಂಡನೆಯಾದವು. 64 ತಜ್ಞರು ಭಾಗವಹಿಸಿದ್ದರು. ಮೂರು ವೇದಿಕೆಗಳಲ್ಲಿ ಸಮಾವೇಶ ತಾಂತ್ರಿಕ ಉಪನ್ಯಾಸ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಆರೋಗ್ಯಕ್ಕೆ ಪೂರಕವಾದ ಊಟ ಉಪಾಹಾರಗಳನ್ನು ನಾಲ್ಕು ದಿನವೂ ನೀಡಲಾಯಿತು. ಪ್ರತಿ ದಿನ ನೂರು ಸಾಧಕರಿಗೆ ಆಯುರ್ವೇದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.