ADVERTISEMENT

ಬೆಂಗಳೂರು: ಅರಮನೆ ಮೈದಾನದಲ್ಲಿ ಆಯುರ್ವೇದ 'ಪ್ರಪಂಚ'

ನಾಲ್ಕು ದಿನಗಳ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನಕ್ಕೆ ಚಾಲನೆ ಆಯುರ್ವೇದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 15:52 IST
Last Updated 25 ಡಿಸೆಂಬರ್ 2025, 15:52 IST
ವಚನಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರೇಕ್ಷಕರು ಯೋಗ ಹಾಗೂ ಪ್ರಾಣಾಯಾಮ ಮಾಡಿದರು
ಪ್ರಜಾವಾಣಿ ಚಿತ್ರಗಳು
ವಚನಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪ್ರೇಕ್ಷಕರು ಯೋಗ ಹಾಗೂ ಪ್ರಾಣಾಯಾಮ ಮಾಡಿದರು ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಆಯುರ್ವೇದದ ದೇವರೆಂದು ಕರೆಯಲ್ಪಡುವ ಧನ್ವಂತರಿಯ ಆರಾಧನೆ ಒಂದೆಡೆಯಾದರೆ, ವಿದ್ಯಾರ್ಥಿಗಳಿಂದ ಆಯುರ್ವೇದದ ಮಹತ್ವ ಸಾರುವ ಕಿರು ನಾಟಕಗಳ ಪ್ರದರ್ಶನ ಇನ್ನೊಂದೆಡೆ. ದಾಖಲೆ ಆಧಾರಿತ ಸಂಶೋಧನಾ ಪ್ರಬಂಧಗಳ ಮಂಡನೆ, ಆಯುರ್ವೇದ ಕ್ಷೇತ್ರದ ಸಾಧಕರಿಗೆ ಸನ್ಮಾನ, ಆಯುರ್ವೇದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ...

ಹೀಗೆ ಆಯುರ್ವೇದ ಕ್ಷೇತ್ರದ ವೈಶಿಷ್ಟ್ಯ ಅನಾವರಣ ಮಾಡಿದ್ದು ಅರಮನೆ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ. ಕಜೆ ಆಯುರ್ವೇದಿಕ್ ಚಾರಿಟೆಬಲ್ ಫೌಂಡೇಷನ್ ಹಮ್ಮಿಕೊಂಡಿರುವ ನಾಲ್ಕು ದಿನಗಳ ಈ ಸಮ್ಮೇಳನಕ್ಕೆ ಗುರುವಾರ ಚಾಲನೆ ದೊರೆಯಿತು. ಚಂಡೆ ವಾದನ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಮಠಾಧೀಶರು ಹಾಗೂ ಗಣ್ಯರನ್ನು ಬರಮಾಡಿಕೊಳ್ಳಲಾಯಿತು.

ಮುಖ್ಯ ವೇದಿಕೆಯಾದ ಋಷಿ ರಾಜ ವೈದ್ಯ ಸಭಾವು ಆಯುರ್ವೇದ ಚಿಕಿತ್ಸಾ ಪದ್ಧತಿ ಬಗೆಗಿನ ಚಿಂತನ ಮಂಥನಕ್ಕೆ ಸಾಕ್ಷಿಯಾಯಿತು. ಆಯುರ್ವೇದದ ಜತೆಗೆ ಅಲೋಪಥಿ, ಹೋಮಿಯೋಪಥಿ, ಸಿದ್ಧ, ನ್ಯಾಚುರೋಪಥಿ ಹಾಗೂ ಯುನಾನಿ ವೈದ್ಯಕೀಯ ಪದ್ಧತಿಯ ತಜ್ಞರೂ ಸಮ್ಮೇಳನದಲ್ಲಿ ವಿಷಯ ಮಂಡಿಸಿದರು. 

ADVERTISEMENT

ಆಯುರ್ವೇದ ಚಿಕಿತ್ಸಾ ಕ್ಷೇತ್ರದ ಸಾಧಕರನ್ನೂ ಸಮ್ಮೇಳನದಲ್ಲಿ ಗೌರವಿಸಲಾಯಿತು. ವೈಜ್ಞಾನಿಕ ವಿಚಾರಗೋಷ್ಠಿಗಳಿಗೆ ‘ಚರಕ ಸಭಾ’ ವೇದಿಕೆಯಾಯಿತು. ‘ಆಯುರ್ವೇದ’ ವಿಷಯ ವಸ್ತುವನ್ನು ಆಧರಿಸಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯು ಆಯುರ್ವೇದದ ಮಹತ್ವ ಸಾರುವ ಜತೆಗೆ ನೆರೆದಿದ್ದ ಜನರನ್ನು ರಂಜಿಸಿತು. ಈ ಸ್ಪರ್ಧೆಗಾಗಿ ‘ಅಶ್ವಿನಿ ರಂಗಸ್ಥಳ’ ವೇದಿಕೆ ನಿರ್ಮಿಸಲಾಗಿದ್ದು, ನಾಲ್ಕೂ ದಿನ ಇಲ್ಲಿ ಸ್ಪರ್ಧೆ ನಡೆಯಲಿದೆ. ಪ್ರಥಮ ಸ್ಥಾನ ಪಡೆದವರಿಗೆ ₹ 3 ಲಕ್ಷ ನಗದು ಸಹಿತ ಒಟ್ಟು ₹ 11 ಲಕ್ಷ ನಗದು ಬಹುಮಾನವನ್ನು ಈ ಸ್ಪರ್ಧೆ ಒಳಗೊಂಡಿದೆ.

ಸಮ್ಮೇಳನದಲ್ಲಿ ವಿಚಾರಗೋಷ್ಠಿಗಳು ಒಂದೆಡೆಯಾದರೆ, ಇನ್ನೊಂದೆಡೆ ಧನ್ವಂತರಿ ಮಹಾಯಜ್ಞ ನಡೆಯಿತು. ಧನ್ವಂತರಿಯ ಪೂಜೆ ಹಾಗೂ ಆರಾಧನೆಗಳು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ನೆರವೇರಿದವು. ಹತ್ತು ಆಯುರ್ವೇದ ಅನುಭವ ಕೇಂದ್ರಗಳನ್ನು ನಿರ್ಮಿಸಲಾಗಿದ್ದು, ಚಿಕಿತ್ಸೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನಕ್ಕೆ ಬಂದಿದ್ದವರನ್ನು ಮುಖ್ಯ ವೇದಿಕೆಗೆ ಕರೆತಂದಿತು. 350 ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಲೇಸರ್‌ ಶೋ ಮೂಲಕ ಆಯುರ್ವೇದದ ಮಹತ್ವ ಸಾರಲಾಯಿತು. ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ವಿವಿಧ ಕಾರ್ಯಕ್ರಮಗಳು ನಡೆದವು.

ಸಮ್ಮೇಳನದಲ್ಲಿ ಚಂಡೆ ವಾದಕರು ಹಾಗೂ ಗೊಂಬೆ ವೇಷಧಾರಿಗಳು ಪ್ರದರ್ಶನ ನೀಡಿದರು 
ಆಹಾರವನ್ನೇ ಔಷಧದ ರೂಪದಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯ. ಆಹಾರ ಜೀವನ ಪದ್ಧತಿ ಬದಲಾಯಿಸಿಕೊಂಡಲ್ಲಿ ಅನೇಕ ರೋಗಗಳನ್ನು ಪರಿಹರಿಸಿಕೊಳ್ಳಬಹುದು.
– ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ 
ಆಯುರ್ವೇದ ನಮ್ಮ ದೇಶದ ಸ್ವತ್ತಾಗಿದೆ. ನಾವು ಜೀವನ ಪದ್ಧತಿಯನ್ನು ಸರಿಪಡಿಸಿಕೊಂಡು ಆಯುರ್ವೇದವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
– ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಆಯುರ್ವೇದ ಉತ್ಪನ್ನ ಪ್ರದರ್ಶನ

ಸಾವಿರಾರು ಸಂಖ್ಯೆಯಲ್ಲಿ ನಗರದ ವಿವಿಧೆಡೆಯಿಂದ ಬಂದಿದ್ದ ಜನರು ವಿವಿಧ ಕಂಪನಿಗಳ ಆಯುರ್ವೇದ ಉತ್ಪನ್ನಗಳ ಬಗ್ಗೆ ವಿಚಾರಿಸಿ ಆರೋಗ್ಯ ವೃದ್ಧಿಗೆ ಪೂರಕವಾದ ಉತ್ಪನ್ನಗಳನ್ನು ಖರೀದಿಸಿದರು. ಮಳಿಗೆಗಳ ಪ್ರತಿನಿಧಿಗಳು ಆಯುರ್ವೇದ ಚಿಕಿತ್ಸೆ ಔಷಧ ಹಾಗೂ ಉತ್ಪನ್ನಗಳ ಮಹತ್ವವನ್ನು ಜನರಿಗೆ ತಿಳಿಸಿದರು.

ಸಾವಯವ ಗೃಹ ಹಾಗೂ ಕರಕುಶಲ ಉತ್ಪನ್ನಗಳ ಮಳಿಗೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಇಲ್ಲಿ ಸುಮಾರು 200 ಮಳಿಗೆಗಳಿದ್ದವು. ದೇಸಿ ಗೋ ಪ್ರದರ್ಶನ ಆಹಾರೋತ್ಪನ್ನಗಳು ಸಮ್ಮೇಳನದಲ್ಲಿದ್ದವು.

ಸಮ್ಮೇಳನದಲ್ಲಿ ಇಂದು

ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದ ಎರಡನೇ ದಿನವಾದ ಶುಕ್ರವಾರವೂ ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆವರೆಗೆ ಅರಮನೆ ಮೈದಾನದಲ್ಲಿ (ಗೇಟ್ ಸಂಖ್ಯೆ 6) ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 9 ಗಂಟೆಗೆ ಮುಖ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಈಶ ಫೌಂಡೇಷನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ನಿತ್ಯಸ್ಥಾನಂದ ಗೌರಿಗದ್ದೆಯ ವಿನಯ್ ಗುರೂಜಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ವಿಆರ್‌ಎಲ್‌ ಸಮೂಹದ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಉದಯವಾಣಿ ಸಂಪಾದಕ ರವಿಶಂಕರ್ ಭಟ್ ಭಾಗವಹಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.