ADVERTISEMENT

ವಾರದಲ್ಲಿ 72 ಲಕ್ಷ ಮಾತ್ರೆ ಹಸ್ತಾಂತರ: ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ

ನೋಟಿಸ್ ಬಗ್ಗೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 0:27 IST
Last Updated 3 ಆಗಸ್ಟ್ 2020, 0:27 IST
ಡಾ.ಗಿರಿಧರ ಕಜೆ
ಡಾ.ಗಿರಿಧರ ಕಜೆ   

ಬೆಂಗಳೂರು: ‘ಕೊರೊನಾ ಸೋಂಕಿತರೊಂದಿಗೆ ನೇರ ಸಂಪರ್ಕ ಹೊಂದಿದ್ದವರಿಗೆ ಉಚಿತವಾಗಿ ವಿತರಿಸಲು 72 ಲಕ್ಷ ಆಯುರ್ವೇದ ಮಾತ್ರೆಗಳನ್ನು ರಾಜ್ಯ ಸರ್ಕಾರಕ್ಕೆ ಒಂದು ವಾರದಲ್ಲಿ ಹಸ್ತಾಂತರಿಸಲಾಗುವುದು‌’ ಎಂದು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ತಿಳಿಸಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶಿಷ್ಟಾಚಾರ ಸಮಿತಿಯು ಜು.17ರಂದು ಡಾ.ಗಿರಿಧರ್ ಕಜೆ ಅವರಿಗೆ ನೀಡಿದೆ ಎಂಬ ನೋಟಿಸ್‌ನ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ವೈದ್ಯಕೀಯ ಪ್ರಯೋಗದ ಫಲಿತಾಂಶದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಸೂಚಿಸಲಾಗಿದೆ. ಈ ಬಗ್ಗೆ ಕಜೆ ಅವರು ಫೇಸ್ ಬುಕ್ ಲೈವ್‌ನಲ್ಲಿ ಮಾತನಾಡಿ, ‘ಈವರೆಗೆ ಯಾವುದೇ ನೋಟಿಸ್ ನನಗೆ ತಲುಪಿಲ್ಲ. ನೋಟಿಸ್ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದರ ಬಗ್ಗೆ ಸ್ಪಷ್ಟನೆ ಕೇಳಿ ಸಮಿತಿಗೆ ಪತ್ರ ಬರೆದಿರುವೆ’ ಎಂದು ತಿಳಿಸಿದರು.

‘ಯಾವುದೇ ಲಾಭದ ಉದ್ದೇಶದಿಂದ ಈ ಪ್ರಯೋಗ ಮಾಡಿಲ್ಲ. ‘ಭೌಮ್ಯ’ ಮತ್ತು ‘ಸಾತ್ಮ್ಯ’ ಮಾತ್ರೆಗಳನ್ನು 20 ವರ್ಷಗಳಿಂದ ರೋಗಿಗಳಿಗೆ ನೀಡುತ್ತಿದ್ದೇನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ಕೋವಿಡ್ ರೋಗಿಗಳ ಮೇಲೆ ಜೂ.7ರಿಂದ ಜೂ.25ರವರೆಗೆ ವೈದ್ಯಕೀಯ ಪ್ರಯೋಗ ನಡೆಸಲಾಗಿತ್ತು. ಉತ್ತಮ ಫಲಿತಾಂಶ ದೊರೆತಿದೆ ಎಂದು ಸ್ವತಃ ಆರೋಗ್ಯ ಸಚಿವರೇ ಸ್ಷಷ್ಟಪಡಿಸಿದ್ದಾರೆ. ಪ್ರಯೋಗದ ಅವಧಿಯಲ್ಲಿ ನಮ್ಮ ಯಾವುದೇ ಕೇಂದ್ರದಲ್ಲಿ ಈ ಮಾತ್ರೆಗಳನ್ನು ರೋಗಿಗಳಿಗೆ ನೀಡಿರಲಿಲ್ಲ. ಇದರ ದರವನ್ನೂ ಬಹಿರಂಗಪಡಿಸಿರಲಿಲ್ಲ. ಪ್ರಯೋಗದ ಎಲ್ಲ ನಿಯಮವನ್ನು ಪಾಲಿಸಿದ್ದೇನೆ’ ಎಂದರು.

ADVERTISEMENT

‘10 ಮಂದಿ ಮೇಲೆ ಮಾಡಿದ ಪ್ರಯೋಗಕ್ಕೂ ಮಹತ್ವವಿದೆ. ಒಂದು ಸಾವಿರ ಮಂದಿ ಮೇಲೆ ಪ್ರಯೋಗ ಮಾಡಲು ಅವಕಾಶ ನೀಡುವ ಜತೆಗೆ ಸೋಂಕಿತರ ನೇರ ಸಂಪರ್ಕಿತರಿಗೆ ಈ ಮಾತ್ರೆಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ‘ ಎಂದರು.

‘ಕೊರೊನಾ ದುರ್ಬಲ ವೈರಾಣು’

‘ಡೆಂಗಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ಒಳಗಾದವರಿಗೆ ಲಕ್ಷಣಗಳು ಬಹಿರಂಗವಾಗಿ ಕಾಣಿಸಿಕೊಳ್ಳುತ್ತವೆ. ಆದರೆ, ಕೊರೊನಾ ಸೋಂಕಿತರಲ್ಲಿ ಲಕ್ಷಣವೇ ಗೋಚರಿಸುತ್ತಿಲ್ಲ. ಶೇ 3ರಷ್ಟು ಮಂದಿಗೆ ಮಾತ್ರ ಹೆಚ್ಚಾಗಿ ಬಾಧಿಸುತ್ತಿದೆ. ಆದರೆ, ವೇಗವಾಗಿ ಹರಡುತ್ತಿದೆ. ಸೋಂಕು ಪ್ರಬಲವಾಗಿದ್ದರೆ ಸೋಂಕಿತ ವ್ಯಕ್ತಿಯ ಮನೆಯ ಎಲ್ಲ ಸದಸ್ಯರು ಕೋವಿಡ್ ಪೀಡಿತರಾಗುತ್ತಿದ್ದರು. ನಮ್ಮಲ್ಲಿ ಸೋಂಕು ದುರ್ಬಲವಾಗುತ್ತಿದೆ’ ಎಂದು ಗಿರಿಧರ ಕಜೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.