ಬೆಂಗಳೂರು:ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಆಯುರ್ವೇದಿಕ್ ಸೈನ್ಸ್ ಸಂಸ್ಥೆಯು ಗಿಡಮೂಲಿಕೆಗಳನ್ನು ಬಳಸಿ, ರೋಗನಿರೋಧಕ ಶಕ್ತಿ ಹೆಚ್ಚಿಸುವ ‘ಆಯುಷ್ 64’ ಔಷಧವನ್ನು ಸಂಶೋಧಿಸಿದೆ. ಈ ಔಷಧವು ಕೋವಿಡ್ ಕಾಯಿಲೆಯ ತೀವ್ರತೆ ತಡೆಯಲು ಸಹಕಾರಿ ಎನ್ನುವುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
ಇದನ್ನು ಶ್ರೀ ಶ್ರೀ ತತ್ವ ಸಂಸ್ಥೆಯು ಹೊರತಂದಿದ್ದು, ಕೇಂದ್ರ ಆಯುಷ್ ಸಚಿವಾಲಯದಿಂದ ಮಾನ್ಯತೆ ದೊರೆತಿದೆ. ದೇಶದಲ್ಲಿ 6 ಹಂತದ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. ಬುಧವಾರ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಈ ಔಷಧವನ್ನು ಲೋಕಾರ್ಪಣೆ ಮಾಡಲಾಯಿತು.
‘ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಈ ಕಾಯಿಲೆಗೆ ಆಯುರ್ವೇದ ಪದ್ಧತಿಯಲ್ಲಿ ಸಂಶೋಧಿಸಲಾದ ‘ಆಯುಷ್–64’ ಉತ್ತಮ ಫಲಿತಾಂಶ ನೀಡಿದೆ. ಮಾತ್ರೆಗಳ ರೂಪದಲ್ಲಿ ಇರುವ ಈ ಔಷಧವನ್ನು ಕೊರೊನಾ ಸೋಂಕಿನ ಸೌಮ್ಯ ಮತ್ತು ಮಧ್ಯಮ ಲಕ್ಷಣಗಳನ್ನು ಹೊಂದಿರುವವರಿಗೆ ಒದಗಿಸಲಾಗಿತ್ತು. ಈ ಮಾತ್ರೆಗಳನ್ನು ಸೇವಿಸಿದ ಸೋಂಕಿತರು ವೇಗವಾಗಿ ಚೇತರಿಸಿಕೊಂಡರು. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಇದು ಹೊಂದಿದೆ’ ಎಂದು ಶ್ರೀ ಶ್ರೀ ತತ್ವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ್ ವರ್ಚಸ್ವಿ ತಿಳಿಸಿದರು.
‘ಕೆಮ್ಮು, ಶೀತ ಸೇರಿದಂತೆ ವಿವಿಧ ವೈರಾಣು ಸಂಬಂಧಿ ಅನಾರೋಗ್ಯ ಸಮಸ್ಯೆ ವಿರುದ್ಧ ಇದು ಕಾರ್ಯನಿರ್ವಹಿಸಲಿದೆ. ಲಕ್ಷಣ ರಹಿತ ಕೋವಿಡ್ ಪೀಡಿತರು ದಿನಕ್ಕೆ ಎರಡು ಬಾರಿಯಂತೆ 20 ದಿನಗಳು ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಸೌಮ್ಯ ಮತ್ತು ಮಧ್ಯಮ ಲಕ್ಷಣ ಇರುವವರು ದಿನಕ್ಕೆ ಮೂರು ಬಾರಿ ಮಾತ್ರೆಗಳನ್ನು ಪಡೆಯಬೇಕಾಗುತ್ತದೆ. ಮಲೇರಿಯಾ ಜ್ವರ ಹೋಗಲಾಡಿಸಲು ಕೂಡ ಇದು ಸಹಕಾರಿ’ ಎಂದು ವಿವರಿಸಿದರು.
ಆಯುಷ್ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಕೊಟೆಚಾ ಮಾತನಾಡಿ, ‘ಆಯುರ್ವೇದ ವೈದ್ಯಕೀಯ ಪದ್ಧತಿಯಡಿ ಕೂಡ ರೋಗನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿಯಾದ ಔಷಧಗಳನ್ನು ಹಲವರಿಗೆ ವಿತರಿಸಲಾಗಿದೆ. ‘ಆಯುಷ್–64’ ಔಷಧವು ಕೋವಿಡ್ ಪೀಡಿತರ ಮೇಲೆ ಕಾರ್ಯನಿರ್ವಹಿಸಿರುವ ಬಗ್ಗೆ ವೈಜ್ಞಾನಿಕ ಪುರಾವೆಗಳು ಲಭ್ಯವಿದೆ. ಇದನ್ನು ಪಡೆದವರಿಗೆ ಸೋಂಕು ತಗುಲಿದರೂ ಕಾಯಿಲೆಯ ತೀವ್ರತೆ ಕಡಿಮೆ ಇರುತ್ತದೆ. ಐಸಿಯು, ವೈದ್ಯಕೀಯ ಆಮ್ಲಜನಕದ ಸಂಪರ್ಕ ಹೊಂದಿರುವ ಹಾಸಿಗೆಯ ಅಗತ್ಯ ಬೀಳುವುದಿಲ್ಲ. ಮನೆಯಲ್ಲಿಯೇ ವ್ಯಕ್ತಿ ಚೇತರಿಸಿಕೊಳ್ಳುತ್ತಾನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.