ADVERTISEMENT

‘ಆಜಾದ್‌ ಕಾಶ್ಮೀರ’ ಬರಹವಿದ್ದ ಟೀ–ಶರ್ಟ್‌ ಧರಿಸಿ ಓಡಾಟ: ವಿದ್ಯಾರ್ಥಿಯ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 13:34 IST
Last Updated 8 ಅಕ್ಟೋಬರ್ 2025, 13:34 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಬೆಂಗಳೂರು: ‘ಆಜಾದ್ ಕಾಶ್ಮೀರ’ ಎಂಬ ಬರಹವಿದ್ದ ಟೀ–ಶರ್ಟ್‌ ಧರಿಸಿಕೊಂಡು ಓಡಾಡುತ್ತಿದ್ದ ಯುವಕನ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಠಾಣೆಯ ಪಿಎಸ್‌ಐ ಮೋಹನ್‌ಕುಮಾರ್ ಅವರು ನೀಡಿದ ದೂರು ಆಧರಿಸಿ ಕೆಂಗುಂಟೆ ವೃತ್ತದ ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿ ಇನಾಯತ್‌ ಅಮೀನ್‌ (20) ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) 196 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.

‘ತನಗೆ ಬೇರೊಬ್ಬರು ಟೀ–ಶರ್ಟ್‌ ನೀಡಿದ್ದರು. ಹಿಂಬದಿಯಲ್ಲಿ ‘ಆಜಾದ್‌ ಕಾಶ್ಮೀರ’ ಎನ್ನುವ ಬರಹ ಇದ್ದುದು ಗಮನಕ್ಕೆ ಬಂದಿರಲಿಲ್ಲ’ ಎಂಬುದಾಗಿ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ ಎಂದು ಗೊತ್ತಾಗಿದೆ.

‘ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೋಹನ್‌ ಕುಮಾರ್ ಅವರು ಠಾಣೆಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ನೋಡಲ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಸೆ.23ರಂದು ಬೆಳಿಗ್ಗೆ 10ರ ಸುಮಾರಿಗೆ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್ ಪರಿಶೀಲನೆ ನಡೆಸುತ್ತಿದ್ದ ವೇಳೆ, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದ ವಿಡಿಯೊವೊಂದು ಗಮನಕ್ಕೆ ಬಂದಿತ್ತು. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ವಿದ್ಯಾರ್ಥಿ ಧರಿಸಿದ್ದ ಟೀ–ಶರ್ಟ್‌ನಲ್ಲಿ ಆಜಾದ್ ಕಾಶ್ಮೀರ ಎಂದು ಬರೆಯಲಾಗಿತ್ತು. ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಕೃತ್ಯದಲ್ಲಿ ಭಾಗಿಯಾದ ಆರೋಪದಡಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.