ADVERTISEMENT

ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಕೆಲಸ ಕೇಳಿಲ್ಲ: ರಂಗಕರ್ಮಿ ಬಿ.ಜಯಶ್ರೀ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 15:52 IST
Last Updated 20 ಡಿಸೆಂಬರ್ 2025, 15:52 IST
ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಬಿ.ಜಯಶ್ರೀ ಅವರನ್ನು ಕೆ.ಎಂ. ಗಾಯಿತ್ರಿ ಗೌರವಿಸಿದರು.   ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಬಿ.ಜಯಶ್ರೀ ಅವರನ್ನು ಕೆ.ಎಂ. ಗಾಯಿತ್ರಿ ಗೌರವಿಸಿದರು.   ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ‘ತಾತಾ ಗುಬ್ಬಿ ವೀರಣ್ಣ ಹೆಸರಿನಲ್ಲಿ ಎಲ್ಲೂ ಕೆಲಸ ಕೇಳಿಕೊಂಡು ಹೋಗಲಿಲ್ಲ, ಯಾವುದೇ ಕೆಲಸ ಮಾಡಿಲ್ಲ. ನಾನೇನಾದರೂ ತಪ್ಪು ಹೆಜ್ಜೆ ಇಟ್ಟರೆ ಅವರಿಗೆ ಕೆಟ್ಟ ಹೆಸರು ಬರುವುದು ಇಷ್ಟವಿರಲಿಲ್ಲ’ ಎಂದು ರಂಗಕರ್ಮಿ ಬಿ.ಜಯಶ್ರೀ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶನಿವಾರ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿದ್ದ ಅವರು, ‘ರಾಜ್ಯಸಭೆಗೆ ನಾಮನಿರ್ದೇಶನ ಮಾಡುವಾಗಲೂ ಗುಬ್ಬಿ ವೀರಣ್ಣ ಅವರ ಹೆಸರನ್ನು ಬಳಸಿಲ್ಲ’ ಎಂದರು.

‘ರಂಗಭೂಮಿ ಎಂಬುದೇ ಕಣ್ಣಾಮುಚ್ಚೆ ಕಾಡೇಗೂಡೇ ಇದ್ದಂತೆ. ರಂಗಭೂಮಿ ಹರಿಯುವ ನೀರು ಇದ್ದಂತೆ. ಆದರೆ, ಬಣ್ಣ, ಆಕಾರ ಇಲ್ಲ. ರಂಗದ ಮೇಲೆ ಬಣ್ಣ ಹಾಕಿದಾಗಲೇ ಕಾಣುವುದು. ಕಲಾವಿದರೆಲ್ಲರೂ ಕಣ್ಣಾಮುಚ್ಚೆ ಕಾಡೇಗೂಡೇ ಆಡುತ್ತಿದ್ದೆವು. ಇದೇ ನೆನಪಿನಲ್ಲಿ ಆತ್ಮಕತೆಗೆ ‘ಕಣ್ಣಾಮುಚ್ಚೆ ಕಾಡೇಗೂಡೇ’ ಹೆಸರಿಟ್ಟಿದ್ದೇನೆ’ ಎಂದು ತಿಳಿಸಿದರು.

‘ಇಷ್ಟವಾದ ಪಾತ್ರ ಹಾಗೂ ಹಾಡು ಯಾವುದು’ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ರೀತಿ ಕೇಳಿದರೆ ಏನು ಹೇಳುವುದು? ಇಡೀ ದೇಹದಲ್ಲಿ ಯಾವ ಅಂಗ ಇಷ್ಟವಾಯಿತು ಎಂದು ಕೇಳಿದಂತೆ. ಎಲ್ಲ ಪಾತ್ರ, ಹಾಡು ಮುಖ್ಯ. ಎಲ್ಲದ್ದಕ್ಕೂ ಅದರದೇ ವ್ಯಕ್ತಿತ್ವ ಮತ್ತು ಬಣ್ಣ ಇರುತ್ತದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರಾಷ್ಟ್ರೀಯ ರಂಗ ಶಾಲೆ ಎಂಬುದು ಸಾಗರವಿದ್ದಂತೆ. ಹಿಂದಿ, ಇಂಗ್ಲಿಷ್ ಬಿಟ್ಟರೆ ಭಾಷೆ ಮಾತನಾಡುತ್ತಿರಲಿಲ್ಲ. ಒಂದೂವರೆ ತಿಂಗಳು ಮೂಕಾಭಿನಯ ಮಾಡಿಕೊಂಡು ಕಾಲ ಕಳೆಯಬೇಕಾಯಿತು. ನಂತರ ಹಿಂದಿ ಮಾತನಾಡುವುದು ಕಲಿತೆ. ಜ್ಯೋತಿ ದೇಶಪಾಂಡೆ, ಓಂ ಪುರಿ, ನಾಸೀರುದ್ದೀನ್ ಶಾ, ಛಾಯಾ ಆನಂದ್ ಸಹಪಾಠಿಗಳಾಗಿದ್ದರು. ದಕ್ಷಿಣ ಭಾರತದವರು ಎಂಬ ಕಾರಣಕ್ಕೆ ನನಗೆ ಮತ್ತು ಜ್ಯೋತಿಗೆ ನಾಟಕದಲ್ಲಿ ಪಾತ್ರವೇ ಕೊಡುತ್ತಿರಲಿಲ್ಲ. ಆದರೂ ಛಲ ಬಿಡದೇ, ಭಾಷೆ ಕಲಿತು, ನಾಟಕದಲ್ಲಿ ಅಭಿನಯಿಸಿ, ನಿರ್ದೇಶಕರಾಗಿದ್ದ ಇಬ್ರಾಹಿಂ ಅಲ್ಕಾಜಿ ಅವರಿಂದ ಪ್ರಶಂಸೆ ಪಡೆದಿದ್ದೆವು’ ಎಂದು ನೆನಪಿಸಿಕೊಂಡರು.

‘ಯುವಜನರಿಗೆ ಬುದ್ಧಿ ಹೇಳುವ ಶಕ್ತಿ ನಮ್ಮಲ್ಲಿ ಇಲ್ಲ. ಅವರು ಮೊಬೈಲ್‌ನಲ್ಲಿ ಮುಳುಗಿ ಸಂಬಂಧವನ್ನು ಕಳೆದುಕೊಂಡಿದ್ದಾರೆ. ನಾಟಕ ಕಲೆ ಸಮಾಜದಲ್ಲಿ ಬದುಕುವ ದಾರಿ ತೋರಿಸುತ್ತದೆ. ಅದೊಂದೆ ಜೀವಂತ ಕಲೆ, ಬೇರೆ ಮಾಧ್ಯಮದಲ್ಲಿ ಜೀವಂತ ಕಲೆ ಇಲ್ಲ. ರಂಗಭೂಮಿ ಮೇಲೆ ತಂತ್ರಜ್ಞಾನ ತಂದು, ಸೃಜನಶೀಲತೆ ಹಾಳು ಮಾಡಬಾರದು’ ಎಂದರು.

‘ಸಿನಿಮಾ ಗೀತೆ ಹಾಡುವುದಿಲ್ಲ ಎಂದು ಹೇಳಿಲ್ಲ. ಆದರೆ, ರಂಗ ಗೀತೆ ಹಾಡುವ ಜಾಗದಲ್ಲಿ ಸಿನಿಮಾ ಗೀತೆ ಹಾಡಲು ಕೇಳಿದರೆ ಹೇಗೆ? ಸಿನಿಮಾ ವಾದ್ಯಗಳೇ ಬೇರೆ. ಇದು ಸಿನಿಮಾ ವೇದಿಕೆ ಅಲ್ಲ ಎಂದು ಪ್ರೇಕ್ಷಕರಿಗೆ ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ. ಜೀವನದಲ್ಲಿ ಸಾಧಿಸುವುದು ಇನ್ನೂ ಇದೆ. ತಪ್ಪು ಮಾಡಿದ್ರೆ ಹೊಟ್ಟೆಗೆ ಹಾಕಿಕೊಂಡು, ಬೆನ್ನುತಟ್ಟಿ ಪ್ರೋತ್ಸಾಹಿಸಿ’ ಎಂದ ಹಾಡು ಹೇಳುವಂತೆ ಒತ್ತಾಯಿಸಿ ಪ್ರೇಕ್ಷಕರಿಗೆ ಉತ್ತರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯಿತ್ರಿ, ಜಂಟಿ ನಿರ್ದೇಶಕರಾದ ಬನಶಂಕರಿ, ಬಲವಂತರಾವ್ ಪಾಟೀಲ್ ಉಪಸ್ಥಿತರಿದ್ದರು.

‘ಅನುದಾನ ಸಮಾನವಾಗಿ ಹಂಚಿರುವೆ’

‘ನಾನು ಒಬ್ಬ ಕಲಾವಿದೆ ರಾಜಕಾರಣಿ ಅಲ್ಲ. ಎಲ್ಲ ಪಕ್ಷಕ್ಕೂ ಸೇರಿದವಳು. ರಾಜ್ಯಸಭೆ ಸದಸ್ಯೆಯಾಗಿದ್ದಾಗ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿದ್ದೇನೆ. ಶಾಲೆ ಆಸ್ಪತ್ರೆ ಮತ್ತು ಹೆಣ್ಣುಮಕ್ಕಳಿಗೆ ಹೆಚ್ಚು ಅನುದಾನ ನೀಡಿದೆ. ಆದರೆ ದೇವಸ್ಥಾನ ಸಮುದಾಯ ಭವನ ರಸ್ತೆ ಚರಂಡಿ ಕಾಮಗಾರಿಗೆ ನೀಡಲಿಲ್ಲ’ ಎಂದು ಬಿ.ಜಯಶ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.