ADVERTISEMENT

ಜಿಬಿಎ ವ್ಯಾಪ್ತಿ: ನ.1ರಿಂದ ಖಾತಾ ಪರಿವರ್ತನೆ ಅಭಿಯಾನ

‘ಬಿ’–ಖಾತಾದಿಂದ ‘ಎ’–ಖಾತಾಗೆ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 0:11 IST
Last Updated 16 ಅಕ್ಟೋಬರ್ 2025, 0:11 IST
ಜಿಬಿಎ ವ್ಯಾಪ್ತಿಯ ‘ಬಿ’–ಖಾತಾ ನಿವೇಶನ ಮಾಲೀಕರಿಗೆ ‘ಬಿ’–ಖಾತಾದಿಂದ ‘ಎ’–ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ‘ಎ’–ಖಾತಾ ನೀಡಲು ಹೊಸದಾಗಿ ಆರಂಭಿಸಿರುವ ಆನ್‌ಲೈನ್ ವ್ಯವಸ್ಥೆಗೆ ಬುಧವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ಜಿಬಿಎ ವ್ಯಾಪ್ತಿಯ ‘ಬಿ’–ಖಾತಾ ನಿವೇಶನ ಮಾಲೀಕರಿಗೆ ‘ಬಿ’–ಖಾತಾದಿಂದ ‘ಎ’–ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ‘ಎ’–ಖಾತಾ ನೀಡಲು ಹೊಸದಾಗಿ ಆರಂಭಿಸಿರುವ ಆನ್‌ಲೈನ್ ವ್ಯವಸ್ಥೆಗೆ ಬುಧವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ವ್ಯಾಪ್ತಿಯಲ್ಲಿರುವ ‘ಬಿ’ ಖಾತಾ ನಿವೇಶನಗಳಿಗೆ ‘ಎ’ ಖಾತಾ ನೀಡುವ ಅಭಿಯಾನ ನವೆಂಬರ್‌ 1 ರಿಂದ ಆರಂಭವಾಗಲಿದೆ. ಇದರಿಂದ 15 ಲಕ್ಷ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಜಿಬಿಎ ವ್ಯಾಪ್ತಿಯಲ್ಲಿರುವ ‘ಬಿ’–ಖಾತಾ ನಿವೇಶನಗಳಿಗೆ ‘ಎ’–ಖಾತಾ ನೀಡುವುದು ಮತ್ತು ಈವರೆಗೂ ಖಾತಾ ಹೊಂದಿಲ್ಲದ ನಿವೇಶನಗಳಿಗೂ ‘ಎ’–ಖಾತಾ ನೀಡುವ ಆನ್‌ಲೈನ್ ವ್ಯವಸ್ಥೆಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

2,000 ಚ.ಮೀ ವಿಸ್ತೀರ್ಣದ ಆಸ್ತಿಗಳನ್ನು ಹೊಂದಿರುವ ಮಾಲೀಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 2,000 ಚ.ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ಕ್ಯಾಡ್‌ ಡ್ರಾಯಿಂಗ್‌ ಸೇರಿದಂತೆ ಇತರೆ ದಾಖಲೆಗಳನ್ನು ಎಂಜಿನಿಯರ್‌ಗಳ ಮೂಲಕ ನೀಡಬೇಕಾಗುತ್ತದೆ. ನ.1 ರಿಂದ ಪ್ರಾರಂಭವಾಗುವ ಅಭಿಯಾನ 100 ದಿನ ನಡೆಯಲಿದೆ. ₹500 ಅರ್ಜಿ ಶುಲ್ಕವನ್ನು ಕಟ್ಟಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಿಕೊಂಡರೆ ಪಾಲಿಕೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ ಎಂದು ಹೇಳಿದರು.

ADVERTISEMENT

ಆಸ್ತಿ ಮಾಲೀಕರು ಅವರ ಆಸ್ತಿಯ ಮಾರ್ಗಸೂಚಿ ದರದ ಶೇ 5 ರಷ್ಟನ್ನು ಶುಲ್ಕವಾಗಿ ಪಾವತಿಸಬೇಕು. ಬಡಾವಣೆಗಳಿಗೆ ವಿದ್ಯುತ್‌, ನೀರು, ಒಳಚರಂಡಿ ಸೇರಿ ಇತರೇ ಮೂಲಸೌಕರ್ಯ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಶುಲ್ಕ ವಿಧಿಸಲಾಗಿದೆ. 100 ದಿನಗಳ ನಂತರ ಹೆಚ್ಚುವರಿ ಶುಲ್ಕ ನಿಗದಿ ಮಾಡಲಾಗುತ್ತದೆ. ಹೆಚ್ಚುವರಿ ಶುಲ್ಕವನ್ನು ಆ ನಂತರ ತಿಳಿಸಲಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಜಿಬಿಎ ವ್ಯಾಪ್ತಿಯ ಪ್ರತಿ ಪಾಲಿಕೆಯಲ್ಲೂ ಎರಡೆರಡು ಸ್ಥಳಗಳಲ್ಲಿ ಕಚೇರಿಗಳನ್ನು ತೆರೆಯಲಾಗುವುದು. ಬೆಂಗಳೂರು ಒನ್ ಕೇಂದ್ರದಲ್ಲಿಯೂ ನೋಂದಣಿ ಮಾಡಲು ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.

‘ಒಸಿ ಮತ್ತು ಸಿಸಿಗೂ ಹೊಸ ವ್ಯವಸ್ಥೆಗೂ ಸಂಬಂಧವಿಲ್ಲ. ‘ಬಿ’ ಖಾತಾ ಮಾಲೀಕರಿಗೆ ಕಟ್ಟಡ ನಕ್ಷೆ ಅನುಮೋದನೆ ಸದ್ಯಕ್ಕೆ ದೊರೆಯುವುದಿಲ್ಲ. ‘ಬಿ’ ಖಾತಾದಲ್ಲಿರುವ ಬಹುಮಹಡಿ ಕಟ್ಟಡಗಳೂ ‘ಎ’ ಖಾತಾ ಆಗಿ ಬದಲಾವಣೆ ಆಗುವುದಿಲ್ಲ. ಮೊದಲು ನಿವೇಶನಕ್ಕೆ ಖಾತಾ ನೀಡಲಾಗುತ್ತದೆ. ಆ ಜಾಗದಲ್ಲಿರುವ ಕಟ್ಟಡ ಕಾನೂನಿನ ವ್ಯಾಪ್ತಿಯಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತೇವೆ. ಆ ಬಳಿಕ ಕಟ್ಟಡಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದನ್ನು ನಿಗದಿ ಮಾಡುತ್ತೇವೆ. ಅನಿಯಂತ್ರಿತ, ಅನಧಿಕೃತ ಮಾರಾಟ ಮತ್ತು ಅಕ್ರಮ ಆಸ್ತಿಗಳಿಗೆ ಮುಂದಕ್ಕೆ ಅವಕಾಶ ದೊರೆಯದಂತೆ ಮಾಡುವುದು, ನಕಲಿ ಖಾತಾಗಳನ್ನು ಸೃಷ್ಟಿಸಿ ಮೋಸ ಮಾಡುವುದನ್ನು ತಪ್ಪಿಸಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

ಅರ್ಜಿ ಸಲ್ಲಿಸಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಯ ಮುಂದೆ ಮಾಲೀಕನನ್ನು ನಿಲ್ಲಿಸಿ ವಿಡಿಯೊ, ಫೋಟೊ ದಾಖಲೀಕರಣ ಮಾಡಿ ಅಪ್‌ಲೋಡ್‌ ಮಾಡುತ್ತಾರೆ. ಇದನ್ನು ಪರಿಶೀಲಿಸಲು ಹಾಗೂ ತಕರಾರುಗಳನ್ನು ಸಲ್ಲಿಸಲು ಸಹ ಅವಕಾಶ ನೀಡಲಾಗಿದೆ. ಸರ್ಕಾರಿ ಜಾಗ, ಪಿಟಿಸಿಎಲ್‌ ಪ್ರಕರಣಗಳ ಆಸ್ತಿಗಳು, 94 ಸಿ ಸೇರಿದಂತೆ ಇತರೇ ಪ್ರಕರಣಗಳ ಭೂಮಿ ಇದರ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ಆಸ್ತಿ ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ನಮ್ಮ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿದೆ. ದೇಶದಲ್ಲಿ ಯಾರೂ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿಲ್ಲ ಎಂದೂ ಪ್ರಶಂಸೆ ಮಾಡಿದೆ
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

ಮೊದಲ ಬಾರಿಗೆ ‘ಏಕರೂಪ ಖಾತಾ’ ವ್ಯವಸ್ಥೆ ಜಾರಿ

‘ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ ಮಾಡಲಾಗಿದೆ. ಆಸ್ತಿಗಳ ದಾಖಲೆ ಡಿಜಿಟಲೀಕರಣ ಮಾಡಲು ದಾಖಲೆಗಳನ್ನು ಸ್ಕ್ಯಾನ್‌ ಮಾಡಿದ್ದೇವೆ. ಆನ್‌ಲೈನ್‌ ಖಾತಾ ವ್ಯವಸ್ಥೆಯನ್ನೂ ಜಾರಿ ಮಾಡಿದ್ದೇವೆ. 50 ವರ್ಷಗಳಲ್ಲಿ ಇಂತಹ ತೀರ್ಮಾನ ಆಗಿರಲಿಲ್ಲ. ಇದು ನಮ್ಮ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ. ನಿಮ್ಮ ಆಸ್ತಿ ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ನಾವು ಸರಿಪಡಿಸುತ್ತಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಟಿಸಿಪಿ ಕಾಯ್ದೆ 61 ರ ಅಡಿಯಲ್ಲಿ ಅನುಮೋದನೆಗೊಂಡ ಕಂದಾಯ ಜಮೀನಿನಲ್ಲಿ ಇರುವ ನಿವೇಶನಗಳಲ್ಲಿ ಒಂದಷ್ಟು ಜನ ಭೂ ಪರಿವರ್ತನೆ ಮಾಡಿಕೊಳ್ಳದೇ ಕಟ್ಟಡ ಕಟ್ಟಿಕೊಂಡಿದ್ದಾರೆ. ಈ ಆಸ್ತಿಗಳಿಗೆ ಬಿ ಖಾತಾ ನೀಡಲಾಗಿತ್ತು. ಇಂತಹವರಿಗೆ ಬ್ಯಾಂಕ್ ಸಾಲ ದೊರೆಯುತ್ತಿರಲಿಲ್ಲ. ಕಾನೂನು ಪ್ರಕಾರ ಕಟ್ಟಡ ನಕ್ಷೆಗೆ ಅನುಮತಿ ಸೇರಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಪರದಾಡಬೇಕಿತ್ತು. ಸರ್ಕಾರದ ಹೊಸ ಕ್ರಮದಿಂದ ಜನರ ಸಮಸ್ಯೆ ತಪ್ಪುತ್ತದೆ. ಆದರೆ ಈ ನಿವೇಶಗಳಲ್ಲಿ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

2000 ಚದರ ಮೀ.ವರೆಗಿನ ನಿವೇಶನದವರು ಬಿ ಖಾತಾದಿಂದ ಎ ಖಾತಾ/ ಹೊಸದಾಗಿ ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

  • ಮೊಬೈಲ್ ಮತ್ತು ಓಟಿಪಿ ಬಳಸಿ https://bbmp.karnataka.gov.in/BtoAKhata ರಲ್ಲಿ ಲಾಗಿನ್ ಆಗಿ

  • ಅಂತಿಮ ಬಿ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ ವಿವರಗಳನ್ನು ಪಡೆಯಿರಿ

  • ಮಾಲೀಕರ ಆಧಾರ್ ದೃಢೀಕರಿಸಿ

  • ನಿವೇಶನವಿರುವ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ

  • ಭೂ ಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ನಿವೇಶನಗಳು ಅರ್ಹ (ಫ್ಲಾಟ್‌ಗಳು ಅನರ್ಹ)

  • ಸ್ವೀಕೃತಿಯನ್ನು ಪಡೆಯಿರಿ

  • ನಗರ ಪಾಲಿಕೆ ವತಿಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ

  • ನಿವೇಶನದ ಮಾರುಕಟ್ಟೆ ಮೌಲ್ಯದ ಶೇ 5ರಷ್ಟು ಮೊತ್ತವನ್ನು ಏಕ ನಿವೇಶನ ಅನುಮೋದನೆ ಶುಲ್ಕವಾಗಿ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವುದು

  • ಸ್ವಯಂಕೃತ ಏಕ ನಿವೇಶನ ಅನುಮೋದನೆಯಾಗಿ ಅರ್ಹತಾನುಸಾರ ಎ-ಖಾತಾ ವಿತರಣೆ

2000 ಚದರ ಮೀ.ಗೂ ಹೆಚ್ಚಿನ ನಿವೇಶನಗಳಿಗೆ ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ

  • ನೋಂದಾಯಿತ ವಾಸ್ತುಶಿಲ್ಪಿ ಅಥವಾ ಎಂಜಿನಿಯರ್‌ ಅನ್ನು ಸಂಪರ್ಕಿಸಿ

  • ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmpgov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

  • ಅಗತ್ಯ ದಾಖಲೆಗಳು ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಅಪ್‌ಲೋಡ್ ಮಾಡಿ

  • ಆರಂಭಿಕ ಪರಿಶೀಲನಾ ಶುಲ್ಕ ₹500 ಪಾವತಿಸಿ

  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ (ಫ್ಲಾಟ್‌ಗಳಿಗೆ ಅನ್ವಯವಾಗಲ್ಲ)

  • ನಿವೇಶನಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ

  • ಅರ್ಹತಾನುಸಾರ ಅನುಮೋದನೆ * ಅನ್ವಯವಾಗುವ ಶುಲ್ಕಗಳ ಪಾವತಿ

  • ಅರ್ಹತಾನುಸಾರ ಏಕನಿವೇಶನ ಅನುಮೋದನೆ ಪ್ರಮಾಣಪತ್ರ ಡ್ರಾಯಿಂಗ್ ಮತ್ತು ಎ-ಖಾತಾ ವಿತರಣೆ

30 ಅಡಿx 40 ಅಡಿ ನಿವೇಶನಕ್ಕೆ ₹2.10 ಲಕ್ಷ

ಜಿಬಿಎ ವ್ಯಾಪ್ತಿಯಲ್ಲಿನ 30 x 40 ಅಡಿ ಬಿ ಖಾತಾ ನಿವೇಶನಕ್ಕೆ ಎ ಖಾತಾ ಪಡೆಯಲು ಸುಮಾರು ₹2.10 ಲಕ್ಷ ವೆಚ್ಚವಾಗುತ್ತದೆ. ಮಾರ್ಗಸೂಚಿ ದರ ಪ್ರತಿ ಚದರಡಿಗೆ ₹3000 ಇದ್ದರೆ ₹1.80 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಪ್ರತಿ ಚದರ ಮೀಟರ್‌ಗೆ ಸುಮಾರು ₹30 ಅಭಿವೃದ್ಧಿ ಶುಲ್ಕ ಇತರೆ ಶುಲ್ಕಗಳಿರುತ್ತವೆ. ಮಾರ್ಗಸೂಚಿ ದರದ ಅನ್ವಯ ಶುಲ್ಕ ಬದಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.