ಬೆಂಗಳೂರು: ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಬೆಂಗಳೂರು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ.
ನ್ಯಾಯಾಧೀಶ ವಿಶ್ವನಾಥ್ ಚನ್ನಬಸಪ್ಪ ಗೌಡರ್ ಅವರು ರನ್ಯಾ ಪರ ವಕೀಲರು ಮತ್ತು ಡಿಆರ್‌ಐ ವಕೀಲರ ವಾದಗಳನ್ನು ಆಲಿಸಿದ ನಂತರ ಈ ಆದೇಶವನ್ನು ಹೊರಡಿಸಿದ್ದಾರೆ. ಹಾಗಾಗಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರನ್ಯಾ ಇರಲಿದ್ದಾರೆ.
ಜಾಮೀನು ಅರ್ಜಿ ವಿರೋಧಿಸಿದ ಡಿಆರ್‌ಐ, ಈ ಪ್ರಕರಣವು ‘ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ’ ಮತ್ತು ರನ್ಯಾ ತನಿಖೆಗೆ ಸಹಕರಿಸಿಲ್ಲ ಎಂದು ಮಾಹಿತಿ ನೀಡಿತು.
ಇದೇ ವೇಳೆ, ಪ್ರಕರಣದ ಎರಡನೇ ಆರೋಪಿ ತರುಣ್ ರಾಜುಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಜಾಮೀನು ಕೋರಿ ತರುಣ್ ರಾಜು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತರುಣ್ ರಾಜು ಮನವಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್‌ಐ ಪರ ವಕೀಲರು ಕಾಲಾವಕಾಶ ಕೇಳಿರುವುದರಿಂದ ಅರ್ಜಿ ವಿಚಾರಣೆಯನ್ನು ಶನಿವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿ, ಆಕ್ಷೇಪಣೆ ಸಲ್ಲಿಸುವಂತೆ ಡಿಆರ್‌ಐ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.