ಬೆಂಗಳೂರು: ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ(ಎನ್‌ಡಿಪಿಎಸ್) ಬಂಧನದಲ್ಲಿರುವ ಮೂವರು ಆರೋಪಿಗಳ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಎಫ್‌ಐಆರ್ ದಾಖಲಿಸುವ ಮುನ್ನ ಶೋಧ ಕಾರ್ಯ ನಡೆಸಲು ಕಾನೂನಿನಲ್ಲಿ ಪೊಲೀಸರಿಗೆ ಅವಕಾಶ ಇದೆ ಎಂದೂ ಸ್ಪಷ್ಟಪಡಿಸಿದೆ.
ಕೇರಳದ ಎನ್.ಪಿ. ತಸ್ಲೀಮ್, ಕೆ.ವಿ. ಹಸೀಬ್ ಮತ್ತು ಪಿ. ರಾಸಿಕ್ ಅಲಿ ವಾಸವಿದ್ದ ಹುಳಿಮಾವು ಸಮೀಪದ ವಿನಾಯಕ ಲೇಔಟ್ ಮನೆಯಲ್ಲಿ 2020ರ ಜೂನ್ 11ರಂದುಪೊಲೀಸರು ಶೋಧ ನಡೆಸಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು.
‘ಮನೆಯೊಳಗೆ ನಿಷಿದ್ಧ ವಸ್ತುಗಳು ಪತ್ತೆಯಾದರೂ ಚೀಲದಲ್ಲಿ ಇದ್ದ ವಸ್ತುಗಳ ಬಗ್ಗೆ ತಿಳಿವಳಿಕೆ ಇರಲಿಲ್ಲ ಎಂಬುದನ್ನು ಸಾಬೀತುಪಡಿಸುವ ಅವಕಾಶ ಆರೋಪಿಗೆ ಇರುತ್ತದೆ’ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಇದನ್ನು ಒಪ್ಪದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್, ‘ಆರೋಪಿಯ ಮನೆಯಲ್ಲಿ ನಿಷಿದ್ಧ ಚೀಲವೊಂದು ದೊರೆತರೆ, ಅದು ಅವರಿಗೇ ಸೇರಿದ್ದು ಮತ್ತು ಅದರಲ್ಲಿ ಏನಿದೆ ಎಂಬುದು ಅವರಿಗೆ ತಿಳಿದಿರಬೇಕು ಎಂಬುದು ಸಾಮಾನ್ಯ ಪ್ರಜ್ಞೆ. ಅದರಲ್ಲಿರುವ ವಸ್ತುಗಳ ಬಗ್ಗೆ ಗೊತ್ತಿಲ್ಲ ಎನ್ನುವುದಾದರೆ ಅದನ್ನು ಸಾಬೀತುಪಡಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಎಫ್‌ಐಆರ್ ದಾಖಲಿಸದೆ ಶೋಧ ನಡೆಸಲಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಪೊಲೀಸ್ ಅಧಿಕಾರಿಯ ಎದುರು ಒಂದು ಅಪರಾಧ ನಡೆಯುತ್ತಿದ್ದರೆ, ಆರೋಪಿಯನ್ನು ಬಂಧಿಸಿ ಸಾಕ್ಷ್ಯ ಸಂಗ್ರಹಿಸುವುದು ಅವರ ಮೊದಲ ಕೆಲಸ. ನಂತರ ಎಫ್‌ಐಆರ್ ದಾಖಲಿಸಿಕೊಳ್ಳಬೇಕು. ಅಪರಾಧ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಹೋಗಿ ಅದನ್ನು ತಡೆದು ಮಾಹಿತಿ ಸಂಗ್ರಹಿಸಿ ನಂತರ ಎಫ್‌ಐಆರ್ ದಾಖಲಿಸಿಕೊಳ್ಳಲು ಅವಕಾಶ ಇದೆ’ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.